ಭಾರತ-ಪಾಕ್ ಕ್ರಿಕೆಟ್ ಸಮರ ರದ್ದು; ಬಾಂಗ್ಲಾ ಪರ ನಿಂತ ಪಾಕ್ ಪ್ರಧಾನಿ ಶೆಹಬಾಝ್ ಷರೀಫ್
- sathyapathanewsplu
- 7 days ago
- 1 min read

ಮುಂಬರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್ ಲೋಕದ ಹೈವೋಲ್ಟೇಜ್ ಪಂದ್ಯವೆಂದೇ ಪರಿಗಣಿಸಲ್ಪಟ್ಟಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ರದ್ದಾಗುವುದು ಬಹುತೇಕ ಖಚಿತವಾಗಿದೆ. ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿರುವ ಐಸಿಸಿ ಕ್ರಮವನ್ನು ಖಂಡಿಸಿ, ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಲು ಪಾಕಿಸ್ತಾನ ಈ ಆಘಾತಕಾರಿ ನಿರ್ಧಾರ ಕೈಗೊಂಡಿದೆ ಎಂದು ಪಾಕ್ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಲಾಗಿದೆ.
ಬಾಂಗ್ಲಾದೇಶ ತಂಡಕ್ಕೆ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲು ಅವಕಾಶ ನೀಡಬೇಕೆಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಗ್ರಹಕ್ಕೆ ಐಸಿಸಿ ಮನ್ನಣೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, "ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು, ನಾವು ಬಾಂಗ್ಲಾದೇಶದ ಪರವಾಗಿ ನಿಲ್ಲುವುದು ಅನಿವಾರ್ಯ" ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಈ ನಿರ್ಧಾರದ ಮೂಲಕ ಫೆಬ್ರವರಿ 15ರಂದು ನಡೆಯಬೇಕಿದ್ದ ಸಾಂಪ್ರದಾಯಿಕ ಎದುರಾಳಿಗಳ ಕಾಳಗಕ್ಕೆ ತೆರೆ ಬಿದ್ದಂತಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಪಾಕಿಸ್ತಾನ ತಂಡವು ಪಂದ್ಯವನ್ನು ಬಹಿಷ್ಕರಿಸಿ ಮೈದಾನಕ್ಕೆ ಹಾಜರಾಗದಿದ್ದರೆ, ನಿಯಮಾನುಸಾರ ಭಾರತಕ್ಕೆ ನೇರವಾಗಿ 2 ಅಂಕಗಳನ್ನು ನೀಡಲಾಗುತ್ತದೆ. ಪಾಕಿಸ್ತಾನದ ಈ ಹಠಾತ್ ನಿರ್ಧಾರದ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ರೀತಿಯ ಆಯ್ದ ಭಾಗವಹಿಸುವಿಕೆಯು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರಿ ಮೊತ್ತದ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.






Comments