;
top of page

ದೇಶದ ಅತಿ ದೊಡ್ಡ ರಾಬರಿ: ಬೆಳಗಾವಿ ಗಡಿಭಾಗದಲ್ಲಿ 400 ಕೋಟಿ ರೂ ಹಣವಿದ್ದ 2 ಕಂಟೇನರ್​​​ ಹೈಜಾಕ್

  • Writer: sathyapathanewsplu
    sathyapathanewsplu
  • Jan 25
  • 1 min read

ಗೋವಾದಿಂದ ಮಹಾರಾಷ್ಟ್ರಕ್ಕೆ ಸುಮಾರು ₹400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್ ಮಾಡಿರುವ ಘಟನೆ ದೇಶದ ಅಪರಾಧ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಪ್ರಕರಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಈ ಕೃತ್ಯ ನಡೆದಿದ್ದು, ಘಟನೆ ನಡೆದ ಹಲವು ತಿಂಗಳ ಬಳಿಕ ಇದೀಗ ಪ್ರಕರಣ ಬಹಿರಂಗವಾಗಿದೆ.

2025ರ ಅಕ್ಟೋಬರ್ 16ರಂದು ನಡೆದ ಈ ದರೋಡೆ ಪ್ರಕರಣ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ – ಈ ಮೂರು ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನು ತೀವ್ರ ಎಚ್ಚರಿಕೆಯಲ್ಲಿರಿಸಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಎರಡು ಕಂಟೇನರ್‌ಗಳು ಏಕಾಏಕಿ ನಾಪತ್ತೆಯಾಗಿದ್ದು, ಅವುಗಳಲ್ಲಿ ₹400 ಕೋಟಿಗೂ ಅಧಿಕ ನಗದು ಹಣ ಸಾಗಿಸಲಾಗುತ್ತಿತ್ತು ಎಂಬುದು ಇದೀಗ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಮಹಾರಾಷ್ಟ್ರ ಪೊಲೀಸರ ತನಿಖೆಯಿಂದ ಹೊರಬಂದ ಮಾಹಿತಿಯ ಪ್ರಕಾರ, ಈ ಭಾರೀ ಮೊತ್ತದ ಹಣವು ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದೆ ಎನ್ನಲಾಗಿದೆ. ಚೋರ್ಲಾ ಘಾಟ್‌ನಂತಹ ದುರ್ಗಮ ಹಾಗೂ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಕಂಟೇನರ್‌ಗಳನ್ನು ಹೈಜಾಕ್ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕಂಟೇನರ್ ಹೈಜಾಕ್ ಪ್ರಕರಣದ ಕೆಲವೇ ದಿನಗಳ ಬಳಿಕ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನನ್ನು ಕಿಶೋರ್ ಶೇಟ್ ಅವರ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದ ಘಟನೆ ಕೂಡ ಬೆಳಕಿಗೆ ಬಂದಿದೆ. ಸಂದೀಪ್‌ನನ್ನು ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಕಂಟೇನರ್ ಹೈಜಾಕ್‌ಗೆ ಅವನೇ ಕಾರಣ ಎಂದು ಆರೋಪಿಸಿ, ₹400 ಕೋಟಿ ಹಣ ನೀಡದಿದ್ದರೆ ಜೀವ ಉಳಿಯದು ಎಂದು ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಹರಣಕಾರರಿಂದ ತಪ್ಪಿಸಿಕೊಂಡು ಪಾರಾದ ಸಂದೀಪ್ ಪಾಟೀಲ, 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾನೆ. ಈ ದೂರಿನಲ್ಲೇ ₹400 ಕೋಟಿ ನಗದು ಸಾಗಿಸುತ್ತಿದ್ದ ಕಂಟೇನರ್‌ಗಳ ಅಪಹರಣದ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದು, ಇದರ ಆಧಾರದಲ್ಲೇ ಈವರೆಗೂ ಗುಪ್ತವಾಗಿದ್ದ ಭಾರೀ ದರೋಡೆ ಪ್ರಕರಣ ಸಂಪೂರ್ಣವಾಗಿ ಬಹಿರಂಗವಾಗಿದೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಪೊಲೀಸ್ ಮೂಲಗಳ ಪ್ರಕಾರ, ಉಳಿದ ಆರೋಪಿಗಳ ಬಂಧನವಾದ ಬಳಿಕವೇ ನಾಪತ್ತೆಯಾದ ಕಂಟೇನರ್‌ಗಳು ಹಾಗೂ ಹಣ ಪತ್ತೆಯಾಗುವ ಸಾಧ್ಯತೆ ಇದೆ.

ಈ ಕಂಟೇನರ್ ನಾಪತ್ತೆ ಪ್ರಕರಣವು ಅಂತಾರಾಜ್ಯ ವ್ಯಾಪ್ತಿಗೆ ಬರುವುದರಿಂದ, ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯಿಂದ ತನಿಖೆಗೆ ಸಹಕಾರ ನೀಡುವಂತೆ ಅಧಿಕೃತ ಪತ್ರವೂ ಬಂದಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಪೊಲೀಸರ ಸಮನ್ವಯದಲ್ಲಿ ತನಿಖೆ ಮುಂದುವರಿಯುತ್ತಿದ್ದು, ಅಗತ್ಯ ತಾಂತ್ರಿಕ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page