;
top of page

ರಸಗೊಬ್ಬರ ಖರೀದಿಗೆ ‘FID’ ಕಡ್ಡಾಯ – ವಿತರಣೆಯ ಮೇಲೆ ಸರ್ಕಾರದ ಕಣ್ಣಿಟ್ಟ ನಿಗಾ

Apr 29
1 min read

ಕೆ-ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ; ಕಾಳಸಂತೆ ತಡೆಗೆ ಕಟ್ಟುನಿಟ್ಟಿನ ಕ್ರಮ


ರಾಜ್ಯದಲ್ಲಿ ರಸಗೊಬ್ಬರ ವಿತರಣೆಯನ್ನು ಸುಸೂತ್ರಗೊಳಿಸಲು ಹಾಗೂ ಕಾಳಸಂತೆ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ರೈತರು ರಸಗೊಬ್ಬರ ಖರೀದಿಸಲು ‘FID’ (ಫಾರ್ಮರ್ ಐಡಿ) ಕಡ್ಡಾಯವಾಗಿದ್ದು, ತಮ್ಮ ಭೂಮಿಯನ್ನು ಕೂಡ ಅದಕ್ಕೆ ಲಿಂಕ್ ಮಾಡಿರಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ.

ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ರಸಗೊಬ್ಬರ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ರಸಗೊಬ್ಬರದ ಸರಿಯಾದ ಬಳಕೆ ಮತ್ತು ಸಮರ್ಪಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ವಿಶೇಷ ನಿಗಾ ವ್ಯವಸ್ಥೆ ಜಾರಿಗೆ ತಂದಿದೆ.

ಇದರಿಂದಾಗಿ, ‘ಕೆ-ಕಿಸಾನ್’ ತಂತ್ರಜ್ಞಾನದ ಮೂಲಕವೇ ರಸಗೊಬ್ಬರ ವಿತರಣೆ ನಡೆಯಲಿದೆ. ರೈತರ ಭೂಮಿ ಹಾಗೂ ಬೆಳೆದ ಬೆಳೆ ಆಧಾರದ ಮೇಲೆ ಅಗತ್ಯವಿರುವ ಪ್ರಮಾಣದ ರಸಗೊಬ್ಬರ ಮಾತ್ರ ನೀಡಲಾಗುತ್ತದೆ. ಇದರಿಂದ ಅತಿಯಾದ ಬಳಕೆ ತಡೆಗಟ್ಟುವುದರ ಜೊತೆಗೆ ಕಾಳಸಂತೆ ದಂಧೆಗೆ ಬ್ರೇಕ್ ಬೀಳಲಿದೆ.

ಇನ್ನೂ, ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಅಕ್ರಮ ಚಟುವಟಿಕೆಗಳನ್ನು ತಡೆಯುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ರೈತರು ಈಗಾಗಲೇ FID ಹೊಂದಿದ್ದರೆ ತಮ್ಮ ಎಲ್ಲಾ ಸರ್ವೇ ನಂಬರ್‌ಗಳನ್ನು ಅದಕ್ಕೆ ಜೋಡಿಸಿಕೊಳ್ಳಬೇಕು. ಹೊಂದಿರದವರು ಪಹಣಿ ಹಾಗೂ ಆಧಾರ್ ಕಾರ್ಡ್‌ಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಹೊಸದಾಗಿ FID ಸೃಜಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಮತ್ತೊಂದೆಡೆ, ರಸಗೊಬ್ಬರ ಮಾರಾಟಗಾರರು ಕೂಡ ಕೆ-ಕಿಸಾನ್ ತಂತ್ರಾಂಶದ ಮೂಲಕವೇ ಮಾರಾಟ ಮಾಡಬೇಕು. ನಿಯಮ ಉಲ್ಲಂಘನೆ ಅಥವಾ ಗರಿಷ್ಠ ಮಾರಾಟ ಬೆಲೆಗೆ ಮೀರಿದ ಮಾರಾಟ ಕಂಡುಬಂದರೆ ಪರವಾನಗಿ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ.

ಈ ಪ್ರಕ್ರಿಯೆಗಾಗಿ ಪ್ರತ್ಯೇಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದ್ದು, ವಿತರಣೆಗೊಂಡ ರಸಗೊಬ್ಬರದ ಬಳಕೆವರೆಗೆ ಸಂಪೂರ್ಣ ಮಾಹಿತಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಕೇಂದ್ರದಿಂದ ರಾಜ್ಯಕ್ಕೆ ನೀಡುವ ರಸಗೊಬ್ಬರ ವಿತರಣೆಯ ಆಧಾರದ ಮೇಲೆ ಹಂತ ಹಂತವಾಗಿ ಪೂರೈಕೆ ನಡೆಯಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page