ದಕ್ಷಿಣ ಮುಂಬೈನಲ್ಲಿ ದುರ್ಘಟನೆ: ಕಲ್ಲಂಗಡಿ ಸೇವನೆ ಬಳಿಕ ಒಂದೇ ಕುಟುಂಬದ ನಾಲ್ವರು ಮೃತ್ಯು

ದಕ್ಷಿಣ ಮುಂಬೈನಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಊಟದ ನಂತರ ಕಲ್ಲಂಗಡಿ ಸೇವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 25ರಂದು ಜೆಜೆ ಮಾರ್ಗ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಭೋಜನ ನಡೆದಿತ್ತು. ಈ ಸಂದರ್ಭದಲ್ಲಿ ಅಬ್ದುಲ್ಲಾ (40), ಅವರ ಪತ್ನಿ ನಸ್ರೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಸೇರಿದಂತೆ ಒಟ್ಟು ಒಂಬತ್ತು ಮಂದಿ ಚಿಕನ್ ಪುಲಾವ್ ಸೇವಿಸಿದ್ದರು.
ಭೋಜನದ ಬಳಿಕ ಅಬ್ದುಲ್ಲಾ ಕುಟುಂಬ ಮನೆಗೆ ಮರಳಿ ಕಲ್ಲಂಗಡಿ ಸೇವಿಸಿದೆ. ಕೆಲವು ಸಮಯದ ನಂತರ ನಾಲ್ವರಿಗೆ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ವಾಂತಿ ಹಾಗೂ ತಲೆತಿರುಗುವಿಕೆ ಲಕ್ಷಣಗಳು ಶುರುವಾಗಿದೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ನಂತರ ಅವರನ್ನು ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಲ್ಲಂಗಡಿ ವಿಷಪೂರಿತವಾಗಿರಬಹುದೆಂದು ಶಂಕಿಸಲಾಗಿದೆ. ಏಕೆಂದರೆ, ಪುಲಾವ್ ಸೇವಿಸಿದ ಇತರ ಐದು ಅತಿಥಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ಹಿಸ್ಟೋಪಾಥಾಲಜಿ ವರದಿಗಾಗಿ ಕಾಯಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.







Comments