ಟಾರ್ಗೆಟ್ ಪೂರ್ಣಗೊಳಿಸಿಲ್ಲ ಎಂದು 200 ಬಸ್ಕಿ ಶಿಕ್ಷೆ: ತೀವ್ರ ಅನಾರೋಗ್ಯಕ್ಕೆ ತುತ್ತಾದ ಯುವ ಉದ್ಯೋಗಿ!

ಚೀನಾದ ಹ್ಯಾಂಗ್‌ಝೌನಲ್ಲಿರುವ ಖಾಸಗಿ ಸಾಲ ಒದಗಿಸುವ ಕಂಪನಿಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ನಿಗದಿತ ದೈನಂದಿನ ಕೆಲಸದ ಟಾರ್ಗೆಟ್ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ಮ್ಯಾನೇಜರ್ ನೀಡಿದ 200 ಸ್ಕ್ವಾಟ್ಸ್ (ಬಸ್ಕಿ) ಶಿಕ್ಷೆಯಿಂದಾಗಿ ಯಾಂಗ್ ಎಂಬ ಯುವ ಉದ್ಯೋಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಹಣಕಾಸು ಸಲಹೆಗಾರರಾಗಿದ್ದ ಯಾಂಗ್ ಜುಲೈ 28ರಂದು ಟಾರ್ಗೆಟ್ ತಲುಪಲು ವಿಫಲರಾಗಿದ್ದರು. ಮ್ಯಾನೇಜರ್ ದಂಡ ಅಥವಾ 200 ಬಸ್ಕಿ ಶಿಕ್ಷೆಯ ಷರತ್ತು ವಿಧಿಸಿದ್ದರಿಂದ, ಹಣವಿಲ್ಲದೆ ಯಾಂಗ್ ಬಸ್ಕಿ ಹೊಡೆದು ವಿಡಿಯೊ ಕಳುಹಿಸಿದ್ದರು. ಕೊನೆಯಲ್ಲಿ ಕುಸಿದುಬಿದ್ದ ಆಕೆಗೆ ತೀವ್ರ ಕಾಲುನೋವು ಕಾಣಿಸಿಕೊಂಡಿದೆ. ಐದು ದಿನಗಳ ನಂತರ ಆಸ್ಪತ್ರೆಗೆ ದಾಖಲಾದಾಗ ಅತಿಯಾದ ಶ್ರಮದಿಂದ ಸ್ನಾಯುಗಳು ಹಾನಿಗೊಳಗಾಗಿ, ಮೂತ್ರಪಿಂಡದ ಮೇಲೆಯೂ ಪರಿಣಾಮ ಬೀರಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಗೆ 19,000 ರೂಪಾಯಿ ಖರ್ಚು ಮಾಡಿದ ಯಾಂಗ್ ಜುಲೈ 30ರಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜರ್ ತಪ್ಪು ಒಪ್ಪಿಕೊಂಡರೂ ಪರಿಹಾರ ನೀಡಲು ನಿರಾಕರಿಸಿದ್ದಾರೆ. ಕಂಪನಿಯ ಈ ಕ್ರೂರ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







Comments