ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅಂಧ ವಿದ್ಯಾರ್ಥಿನಿಗೆ ಕೊನೆಗೂ ಸಿಕ್ಕಿತು ನ್ಯಾಯ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ ಅವರಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸಂಭವಿಸಿದ್ದ ಅನ್ಯಾಯಕ್ಕೆ ಕೊನೆಗೂ ನ್ಯಾಯ ದೊರೆತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ತಾಂತ್ರಿಕ ದೋಷದಿಂದ ಆರಂಭಿಕ ಫಲಿತಾಂಶದಲ್ಲಿ ಕೆಲವು ವಿಷಯಗಳಿಗೆ ‘ಗೈರು ಹಾಜರು’ ಎಂದು ನಮೂದಿಸಲಾಗಿದ್ದು, ಅವರು ಅನುತ್ತೀರ್ಣರಾಗಿದ್ದಾರೆ ಎಂಬ ತಪ್ಪು ಮಾಹಿತಿ ಹರಡಿತ್ತು.

ಈ ಘಟನೆಯಿಂದ ಆತಂಕಕ್ಕೊಳಗಾದ ವಿದ್ಯಾರ್ಥಿನಿ ಹಾಗೂ ಕುಟುಂಬದವರ ಮನಸ್ಥಿತಿ ಅತೀವ ದುಃಖಕರವಾಗಿತ್ತು. ಆದರೆ ವಿಷಯದ ಗಂಭೀರತೆಯನ್ನು ಅರಿತ ಸ್ಥಳೀಯ ಶಾಸಕರು ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ತಾಂತ್ರಿಕ ದೋಷವೇ ಈ ಗೊಂದಲಕ್ಕೆ ಕಾರಣ ಎಂಬುದು ಬಹಿರಂಗವಾಯಿತು. ಬಳಿಕ ಮಂಡಳಿ ತಕ್ಷಣ ತಿದ್ದುಪಡಿ ಕ್ರಮ ಕೈಗೊಂಡು ನೂತನ ಫಲಿತಾಂಶ ಪ್ರಕಟಿಸಿತು. ತಿದ್ದುಪಡಿ ಫಲಿತಾಂಶದಲ್ಲಿ ಲೀಸಾ ಖಾನಮ್ 625ರಲ್ಲಿ 603 ಅಂಕಗಳನ್ನು (96.48%) ಗಳಿಸಿರುವುದು ಬೆಳಕಿಗೆ ಬಂದಿದೆ.
ಕೇವಲ 24 ಗಂಟೆಗಳಲ್ಲೇ ಸಂಪೂರ್ಣ ಫಲಿತಾಂಶ ಬದಲಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಂಡಳಿಯ ಕಾರ್ಯಪದ್ದತಿ ಕುರಿತು ಪ್ರಶ್ನೆಗಳು ಎದ್ದಿವೆ. ಅದೇ ವೇಳೆ, ಲೀಸಾ ಅವರ ಸಾಧನೆಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
“ನನ್ನ ಮೇಲೆ ನನಗೆ ನಂಬಿಕೆಯಿತ್ತು. ಈಗ ಫಲಿತಾಂಶ ನೋಡಿ ತುಂಬಾ ಸಂತೋಷವಾಗಿದೆ,” ಎಂದು ಲೀಸಾ ಖಾನಮ್ ಪ್ರತಿಕ್ರಿಯಿಸಿದ್ದಾರೆ. ಮಗಳ ಸಾಧನೆ ಕಂಡು ತಂದೆಯವರು ಆನಂದಭಾಷ್ಪ ಸುರಿಸಿದ್ದು, ತಕ್ಷಣ ಸ್ಪಂದಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ.







Comments