24 ವರ್ಷಗಳ ಬಳಿಕ IVF ಮೂಲಕ ಪಡೆದ ಅವಳಿ ಮಕ್ಕಳ ಸಾವು: ತಾಯಿಯಿಂದಲೇ ಕೃತ್ಯ!

ಬೆಂಗಳೂರು: 24 ವರ್ಷಗಳ ದಾಂಪತ್ಯ ಜೀವನದ ಬಳಿಕ IVF ಚಿಕಿತ್ಸೆಯ ಮೂಲಕ ಅವಳಿ ಹೆಣ್ಣು ಮಕ್ಕಳನ್ನು ಪಡೆದಿದ್ದ ದಂಪತಿಯ ಕುಟುಂಬದಲ್ಲಿ ದುರಂತ ಸಂಭವಿಸಿದೆ. ನಾಲ್ಕು ತಿಂಗಳ ಅವಳಿ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಾಜರಹಳ್ಳಿಯ ಬಿಸಿಸಿಹೆಚ್‌ಎಸ್ ಲೇಔಟ್‌ನಲ್ಲಿ ನಡೆದಿದೆ. ಮಕ್ಕಳ ತಾಯಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.
ವಾಜರಹಳ್ಳಿಯ ನಿವಾಸಿಗಳಾದ ರಾಮಲಿಂಗಪ್ಪ ಮತ್ತು ಉಮಾದೇವಿ 2002ರಲ್ಲಿ ವಿವಾಹವಾಗಿದ್ದರು. ಹಲವು ವರ್ಷಗಳ ಕಾಲ ಮಕ್ಕಳಿಗಾಗಿ ಕಾದಿದ್ದ ದಂಪತಿ, ಬಳಿಕ IVF ಚಿಕಿತ್ಸೆಯ ಮೊರೆ ಹೋಗಿದ್ದರು. ಉಮಾದೇವಿ 40ರ ಹರೆಯದಲ್ಲಿದ್ದಾಗ ಅವಳಿ ಹೆಣ್ಣು ಮಕ್ಕಳು ಜನಿಸಿದ್ದು, ಮೇ 5, 2026ರಂದು ಜನಿಸಿದ್ದ ಮಕ್ಕಳಿಗೆ ಇದೀಗ ನಾಲ್ಕು ತಿಂಗಳಾಗಿತ್ತು.
ಮಕ್ಕಳು ಜನಿಸಿದ ಬಳಿಕ ಕುಟುಂಬದಲ್ಲಿ ಸಂತಸ ಮನೆಮಾಡಿತ್ತು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಉಮಾದೇವಿ ಮಕ್ಕಳ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದರು ಹಾಗೂ ಮಕ್ಕಳನ್ನು ಆಶ್ರಮಕ್ಕೆ ಸೇರಿಸುವಂತೆ ಹೇಳುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ವರ್ತನೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ನಿಮ್ಹಾನ್ಸ್‌ನಲ್ಲಿ ಮನೋವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು ಎನ್ನಲಾಗಿದೆ.
ಹೆರಿಗೆಯ ನಂತರದ ಖಿನ್ನತೆ ಹಾಗೂ ಹಾರ್ಮೋನ್‌ಗಳಲ್ಲಿನ ಬದಲಾವಣೆಯಿಂದ ಇಂತಹ ವರ್ತನೆ ಉಂಟಾಗಿರಬಹುದು ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.
ಘಟನೆ ನಡೆದ ದಿನ ರಾಮಲಿಂಗಪ್ಪ ಮನೆಯಿಂದ ಹೊರಗೆ ಹೋಗಿ ವಾಪಸ್ ಬಂದಾಗ, ಉಮಾದೇವಿ ಕೊಠಡಿಯ ಬಾಗಿಲು ಹಾಕಿಕೊಂಡಿರುವುದು ಕಂಡುಬಂದಿದೆ. ಬಾಗಿಲು ತೆರೆದು ನೋಡಿದಾಗ ಅವರು ಆತ್ಮಹತ್ಯೆಗೆ ಯತ್ನಿಸಿರುವುದು ಪತ್ತೆಯಾಗಿದ್ದು, ಕೂಡಲೇ ಅವರನ್ನು ರಕ್ಷಿಸಲಾಗಿದೆ.
ಇದೇ ವೇಳೆ ಕೊಠಡಿಯಲ್ಲಿ ನಾಲ್ಕು ತಿಂಗಳ ಅವಳಿ ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನೀರಿನಲ್ಲಿ ಮುಳುಗಿದ ಪರಿಣಾಮ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಕ್ಕಳನ್ನು ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿಸಿರುವ ಶಂಕೆ ವ್ಯಕ್ತವಾಗಿದೆ. ಆದರೆ ಘಟನೆಗೆ ಸಂಬಂಧಿಸಿದ ಸಂಪೂರ್ಣ ಸತ್ಯಾಸತ್ಯತೆ ಹಾಗೂ ಸಾವಿನ ನಿಖರ ಕಾರಣ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
24 ವರ್ಷಗಳ ಬಳಿಕ IVF ಮೂಲಕ ಮಕ್ಕಳನ್ನು ಪಡೆದಿದ್ದ ಕುಟುಂಬಕ್ಕೆ ಕೇವಲ ನಾಲ್ಕು ತಿಂಗಳಲ್ಲೇ ಎದುರಾದ ಈ ದುರಂತ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಶೋಕಕ್ಕೆ ಕಾರಣವಾಗಿದೆ.







Comments