ಬೆಳ್ಳಾರೆ: ಜಲದುರ್ಗಾದೇವಿ ದೇವಸ್ಥಾನದ ಆಡಳಿತಾಧಿಕಾರಿ ವಿರುದ್ಧ ಎಸಿ ಅವರಿಗೆ ದೂರು - ತನಿಖೆಗೆ ಆಗ್ರಹ

ಬೆಳ್ಳಾರೆ: ಸುಪ್ರಸಿದ್ಧ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಸಿದ್ಧತೆಗಳ ನಡುವೆಯೇ ಆಡಳಿತಾಧಿಕಾರಿಯ ನಡೆ ವಿವಾದಕ್ಕೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ 'ಜಲಧಿ ಇವೆಂಟ್ಸ್ ಪೆರುವಾಜೆ' ಸಂಸ್ಥೆಯು ದೇವಿಯ ಮೇಲಿನ ಭಕ್ತಿಯಿಂದ ಜಾತ್ರೋತ್ಸವಕ್ಕೆ ಬೇಕಾದ ಶಾಮಿಯಾನ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಾ ಬಂದಿದೆ. ಆದರೆ, ಈ ಬಾರಿ ಉಚಿತ ಸೇವೆ ಲಭ್ಯವಿದ್ದರೂ ಸಹ ಆಡಳಿತಾಧಿಕಾರಿಯವರು ಶಾಮಿಯಾನಕ್ಕೆ ಪ್ರತ್ಯೇಕವಾಗಿ ಕೋಟೇಶನ್ (ದರಪಟ್ಟಿ) ಆಹ್ವಾನಿಸಿರುವುದು ಭಕ್ತರ ವಲಯದಲ್ಲಿ ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅನುಮಾನಾಸ್ಪದ ನಡೆ ಹಾಗೂ ದೂರು: ಉಚಿತವಾಗಿ ಸೌಲಭ್ಯ ಸಿಗುತ್ತಿದ್ದರೂ ಹಣ ಪಾವತಿಸಿ ಟೆಂಡರ್ ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಆಡಳಿತಾತ್ಮಕ ದುರುದ್ದೇಶದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದೆ. ದರಪಟ್ಟಿ ನೀಡಿದರೂ ದರಪಟ್ಟಿ (ಕೊಟೇಶನ್) ಓಪನ್ ಮಾಡುವ ದಿನಾಂಕವನ್ನು ಇದುವರೆಗೂ ನೀಡಿರುವುದಿಲ್ಲ.
ಈ ಅಪಾರದರ್ಶಕ ವ್ಯವಸ್ಥೆಯು ವ್ಯವಸ್ಥಿತ ಭ್ರಷ್ಟಾಚಾರದ ಮುನ್ಸೂಚನೆಯಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ಆಗ್ರಹಿಸಿ ಮನವಿ: ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಜಲಧಿ ಇವೆಂಟ್ಸ್‌ನ ಮಾಲೀಕರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ (AC) ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ದೇವಾಲಯದ ಆಡಳಿತಾಧಿಕಾರಿಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಮತ್ತು ಉಚಿತ ಸೇವೆ ಲಭ್ಯವಿರುವಾಗ ಸಾರ್ವಜನಿಕ ಹಣದ ದುರುಪಯೋಗವಾಗುವುದನ್ನು ತಡೆಗಟ್ಟಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಭಕ್ತರ ಆರಾಧನಾ ಮನೋಭಾವಕ್ಕೆ ಧಕ್ಕೆ ತರುತ್ತಿರುವ ಈ ಕುರಿತು ಎಸಿ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.







Comments