ಬೆಚ್ಚಿಬೀಳಿಸುವ ಘಟನೆ: ಕೇರ್ ಟೇಕರ್‌ಗಳಿಂದಲೇ ವೃದ್ಧನ ಕೊಲೆ; ಅಸ್ಥಿಪಂಜರದಂತಾದ ಮಗಳು!

ಲಕ್ನೋ: ಮಾನಸಿಕ ಅಸ್ವಸ್ಥ ಮಗಳನ್ನು ನೋಡಿಕೊಳ್ಳಲು ನೇಮಕಗೊಂಡಿದ್ದ ಕೇರ್ ಟೇಕರ್ ದಂಪತಿಗಳೇ ಯಜಮಾನನ ಪ್ರಾಣ ತೆಗೆದ ಭೀಕರ ಘಟನೆ ನಡೆದಿದೆ. ಭಾರತೀಯ ರೈಲ್ವೇಯ ನಿವೃತ್ತ ಹಿರಿಯ ಗುಮಾಸ್ತ ಓಂಪ್ರಕಾಶ್ ಸಿಂಗ್ ರಾಥೋಡ್ (70) ಮೃತಪಟ್ಟ ದುರ್ದೈವಿ. ಪತ್ನಿ ನಿಧನರಾದ ನಂತರ ಅಸ್ವಸ್ಥ ಮಗಳು ರಶ್ಮಿ (27) ಅವರ ಆರೈಕೆಗಾಗಿ ಓಂಪ್ರಕಾಶ್ ಅವರು ರಾಮ್ ಪ್ರಕಾಶ್ ಕುಶ್ವಾಹ ಮತ್ತು ರಾಮದೇವಿ ಎಂಬ ದಂಪತಿಗಳನ್ನು ಕೆಲಸಕ್ಕೆ ಇರಿಸಿಕೊಂಡಿದ್ದರು. ಆದರೆ, ಆರೈಕೆ ಮಾಡಬೇಕಿದ್ದ ಈ ದಂಪತಿಗಳು ಕಳೆದ ಐದು ವರ್ಷಗಳಿಂದ ತಂದೆ-ಮಗಳನ್ನು ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸೋಮವಾರ ಓಂಪ್ರಕಾಶ್ ಅವರ ಸಾವಿನ ಸುದ್ದಿ ತಿಳಿದು ಸಂಬಂಧಿಕರು ಮನೆಗೆ ಧಾವಿಸಿದಾಗ ಈ ದೌರ್ಜನ್ಯ ಜಗತ್ತಿಗೆ ತಿಳಿದಿದೆ. ಆರೋಪಿ ದಂಪತಿಗಳು ಮನೆಯ ಮೇಲಿನ ಅಂತಸ್ತನ್ನು ಆಕ್ರಮಿಸಿಕೊಂಡು ರಾಜಾತಿಥ್ಯ ಅನುಭವಿಸುತ್ತಿದ್ದರೆ, ಇತ್ತ ಓಂಪ್ರಕಾಶ್ ಮತ್ತು ಅವರ ಮಗಳನ್ನು ಕೆಳಮಹಡಿಯ ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಮೃತದೇಹವು ಸಂಪೂರ್ಣ ಸೊರಗಿ ಹೋಗಿದ್ದು, ತೀವ್ರ ನಿಶ್ಯಕ್ತಿಯಿಂದ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ, ಮಗಳು ರಶ್ಮಿ ಕತ್ತಲೆ ಕೋಣೆಯಲ್ಲಿ ಬೆತ್ತಲೆಯಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ದೀರ್ಘಕಾಲದ ಹಸಿವಿನಿಂದಾಗಿ ಆಕೆ ಅಸ್ಥಿಪಂಜರದಂತಾಗಿದ್ದು, ದೇಹದಲ್ಲಿ ಮಾಂಸದ ಕುರುಹೇ ಇಲ್ಲದಷ್ಟು ದಯನೀಯ ಸ್ಥಿತಿಗೆ ತಲುಪಿದ್ದಾಳೆ.
ಓಂಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಈ ಘಟನೆಯಿಂದ ದಿಗ್ರಮೆಗೊಂಡಿದ್ದು, ದಂಪತಿಗಳ ಕ್ರೌರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಸಂತ್ರಸ್ತ ಯುವತಿ ಕುಟುಂಬಸ್ಥರ ಆರೈಕೆಯಲ್ಲಿದ್ದು, ಈ ಭೀಕರ ಕೃತ್ಯ ಎಸಗಿದ ಕೇರ್ ಟೇಕರ್ ದಂಪತಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.







Comments