ಬಂಟ್ವಾಳ: ಕೊಲೆಯತ್ನ ಪ್ರಕರಣದ ಮೂವರು ಆರೋಪಿಗಳ ಬಂಧನ, ಪೊಲೀಸ್ ಕಸ್ಟಡಿಗೆ

ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಬಂಧಿತ ಆರೋಪಿಗಳು. ತೆಂಕಬೆಳ್ಳೂರು ಗ್ರಾಮದ ಪ್ರಶಾಂತ್ ಬೆಳ್ಳಾಡ್ (41) ಹಲ್ಲೆಗೊಳಗಾದವರಾಗಿದ್ದಾರೆ.
ಸೆಪ್ಟೆಂಬರ್ 20 ರಂದು ಸಂಜೆ ಪ್ರಶಾಂತ್ ಬೆಳ್ಳಾಡ್ ಅವರು ಕಮ್ಮಾಜೆಯಲ್ಲಿದ್ದಾಗ, ಆಟೋರಿಕ್ಷಾದಲ್ಲಿ ಬಂದ ಪರಿಚಯಸ್ಥರಾದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಪ್ರಶಾಂತ್ ಬೆಳ್ಳಾಡ್ ಅವರ ದೇಹಕ್ಕೆ ತೀವ್ರ ರಕ್ತಗಾಯಗಳಾಗಿದ್ದವು. ಸ್ಥಳೀಯರು ಹಾಗೂ ಗಾಯಾಳುವಿನ ಪರಿಚಯಸ್ಥರು ಬರುವುದನ್ನು ಕಂಡು ಆರೋಪಿಗಳು ಕೃತ್ಯಕ್ಕೆ ಬಳಸಿದ ಅಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಪ್ರಶಾಂತ್ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ನೀಡಿದ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ 124/2026) ಭಾರತೀಯ ನ್ಯಾಯ ಸಂಹಿತೆ (BNS) ಕಲಂ 109, 352, 351 ಹಾಗೂ 3(5) ರಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರನ್ನೂ ಬಂಧಿಸಿ ಸೆಪ್ಟೆಂಬರ್ 25 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೃತ್ಯದ ಹೆಚ್ಚಿನ ವಿಚಾರಣೆ ಹಾಗೂ ಮಹಜರಿಗಾಗಿ ನ್ಯಾಯಾಲಯವು ಆರೋಪಿಗಳನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.







Comments