ಬಂಟ್ವಾಳದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ಬಾಲಕ: ಅಡುಗೆ ಸಿಬ್ಬಂದಿಯ ಕೈ ಉಳಿಸಿದ ಮನ್ವಿತ್‌ಗೆ ಸಿಎಂ ಡಿಕೆಶಿ ಮೆಚ್ಚುಗೆ

ಬಂಟ್ವಾಳ: ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡ ವೇಳೆ, ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಂಭವಿಸಬಹುದಿದ್ದ ಭಾರೀ ಅನಾಹುತವನ್ನು ತಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲೆಯ ಅಡುಗೆ ಸಿಬ್ಬಂದಿಯೊಬ್ಬರು ವಿದ್ಯುತ್ ಚಾಲಿತ ಯಂತ್ರದಲ್ಲಿ ತೆಂಗಿನಕಾಯಿ ತುರಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಕೈಬೆರಳು ಯಂತ್ರದೊಳಗೆ ಸಿಲುಕಿಕೊಂಡಿದೆ. ನೋವಿನಿಂದ ಅವರು ಕಿರುಚಿಕೊಂಡಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ತಕ್ಷಣ ಧಾವಿಸಿ, ವಿದ್ಯುತ್ ಸ್ವಿಚ್ ಆಫ್ ಮಾಡಿದ್ದಾನೆ.
ಬಾಲಕನ ಈ ತಕ್ಷಣದ ನಿರ್ಧಾರದಿಂದ ಸಿಬ್ಬಂದಿಗೆ ಮತ್ತಷ್ಟು ಗಂಭೀರ ಗಾಯವಾಗುವುದನ್ನು ತಪ್ಪಿಸಲಾಗಿದೆ. ಮನ್ವಿತ್‌ನ ಧೈರ್ಯ, ಸಮಯಪ್ರಜ್ಞೆ ಹಾಗೂ ಮಾನವೀಯ ಕಾಳಜಿಗೆ ಶಾಲೆಯ ಶಿಕ್ಷಕರು ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಮತ್ತು ಧೈರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ.
ಅಪಾಯದ ಸಂದರ್ಭದಲ್ಲಿ ಕ್ಷಣವೂ ತಡಮಾಡದೆ ಸರಿಯಾದ ನಿರ್ಧಾರ ಕೈಗೊಂಡ ಮನ್ವಿತ್, ಅಡುಗೆ ಸಿಬ್ಬಂದಿಯನ್ನು ದೊಡ್ಡ ಅಪಾಯದಿಂದ ಕಾಪಾಡಿದ್ದಾನೆ. ಬಾಲಕನ ಈ ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ ಎಂದು ಸಿಎಂ ಡಿಕೆಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







Comments