ಕುಂದಾಪುರ: ರಥಬೀದಿಯಲ್ಲಿ ಭೀಕರ ಅಗ್ನಿ ದುರಂತ; ಪಟಾಕಿ ಸೇರಿ ಆರು ಅಂಗಡಿಗಳು ಸುಟ್ಟು ಭಸ್ಮ

ಉಡುಪಿ: ಕುಂದಾಪುರದ ಐತಿಹಾಸಿಕ ರಥಬೀದಿಯಲ್ಲಿರುವ ಕಟ್ಟಡವೊಂದರಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಹಲವು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದ್ದು, ಮೊದಲು ಪಟಾಕಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪಟಾಕಿಗಳು ಸಿಡಿದ ಪರಿಣಾಮ ಬೆಂಕಿಯ ಕೆನ್ನಾಲಗೆ ಪಕ್ಕದಲ್ಲಿದ್ದ ಪುಸ್ತಕದಂಗಡಿ ಸೇರಿದಂತೆ ಆರು ಅಧಿಕ ಮಳಿಗೆಗಳಿಗೆ ವೇಗವಾಗಿ ವ್ಯಾಪಿಸಿ ಇಡೀ ಕಟ್ಟಡವೇ ಹೊತ್ತಿ ಉರಿದಿದೆ.
ವೆಂಕಟರಮಣ ದೇವಸ್ಥಾನದ ಎದುರಿನ ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಕಿಯ ಆರ್ಭಟಕ್ಕೆ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು, ಪುಸ್ತಕಗಳು ಹಾಗೂ ವ್ಯಾಪಾರ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ಅದೃಷ್ಟವಶಾತ್ ಮುಂಜಾನೆ ಸಮಯವಾದ್ದರಿಂದ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಜನರನ್ನು ನಿಯಂತ್ರಿಸುವ ಜೊತೆಗೆ ಕಾರ್ಯಾಚರಣೆಗೆ ಸಾಥ್ ನೀಡುತ್ತಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬರಬೇಕಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.







Comments