ರಾಜ್ಯದ ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ: ನಾಳೆಯಿಂದಲೇ ಖಾತೆಗೆ ಬರಲಿದೆ 24ನೇ ಕಂತಿನ ಹಣ
- sathyapathanewsplu
- Dec 21, 2025
- 1 min read

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರು ಕಾತರದಿಂದ ಕಾಯುತ್ತಿದ್ದ 'ಗೃಹಲಕ್ಷ್ಮಿ' ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಸೋಮವಾರದಿಂದಲೇ (ಡಿಸೆಂಬರ್ 22) ಅರ್ಹ ಫಲಾನುಭವಿಗಳ ಖಾತೆಗಳಿಗೆ ಯೋಜನೆಯ ಒಂದು ಕಂತಿನ ಹಣ ಜಮೆಯಾಗಲು ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಯೋಜನೆಯ 24ನೇ ಕಂತಿನ ಹಣವಾಗಿದ್ದು, ಹೊಸ ವರ್ಷದ ಮುನ್ನವೇ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಉಡುಗೊರೆ ಸಿಕ್ಕಂತಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ನಾನು ಯಾವಾಗಲೂ ಯೋಜನೆಯ ಹಣವನ್ನು ಕಂತುಗಳ ರೂಪದಲ್ಲಿ ಹೇಳುತ್ತೇನೆ ಹೊರತು ತಿಂಗಳ ಹೆಸರು ಹೇಳುವುದಿಲ್ಲ. ಈಗಾಗಲೇ ಆರ್ಥಿಕ ಇಲಾಖೆಯು 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವು ಸೋಮವಾರದಿಂದ ಆರಂಭವಾಗಿ ಮುಂದಿನ ಶನಿವಾರದೊಳಗೆ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ತಲುಪಲಿದೆ," ಎಂದು ಸ್ಪಷ್ಟಪಡಿಸಿದರು. ವಿಪಕ್ಷಗಳ ಟೀಕೆ ಹಾಗೂ ಹಣ ಬಿಡುಗಡೆ ವಿಳಂಬದ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ಈ ಮೂಲಕ ಸಚಿವರು ತೆರೆ ಎಳೆದಿದ್ದಾರೆ.
ರಾಜ್ಯದ ಸುಮಾರು 1.26 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಈ ಬಾರಿ 24ನೇ ಕಂತಿನ ಮೊತ್ತವನ್ನು ಒಟ್ಟಾಗಿ ಬಿಡುಗಡೆ ಮಾಡಲು ಸರ್ಕಾರ ಕ್ರಮ ವಹಿಸಿದೆ. ಮೃತಪಟ್ಟವರ ಖಾತೆಗೆ ಹಣ ಜಮೆಯಾಗುವುದನ್ನು ತಡೆಯಲು ಹೊಸ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮರಣ ಪ್ರಮಾಣಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. ಅರ್ಹ ಯಜಮಾನಿಯರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.






Comments