ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಆರೋಪಿ ಅಬ್ದುಲ್ ಗಫೂರ್ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಜೇನು ಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಗಂಭೀರ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಗಫೂರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಮೂಲದ ದೂರುದಾರ ಮಹಿಳೆಯು ತನ್ನ ಪತಿ ಮತ್ತು ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಭಾಗದಲ್ಲಿ ವಾಸವಾಗಿದ್ದು, ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಘಟನೆಯ ವಿವರದಂತೆ, ಆರೋಪಿ ಅಬ್ದುಲ್ ಗಫೂರ್ ದೂರುದಾರರ ಅಪ್ರಾಪ್ತ ಮಗಳಿಗೆ ಜೇನು ಕೃಷಿ ತರಬೇತಿ ನೀಡುವುದಾಗಿ ನಂಬಿಸಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ಕಳೆದ ಎರಡು ತಿಂಗಳಿನಿಂದ ಮಗಳನ್ನು ಆರೋಪಿಯ ಮನೆಯಲ್ಲಿಯೇ ಬಿಟ್ಟಿದ್ದರು. ಇತ್ತೀಚೆಗೆ ಊರಿಗೆ ತೆರಳಿದ್ದ ಪೋಷಕರು ಡಿಸೆಂಬರ್ 19ರಂದು ವಾಪಸ್ ಬಂದಾಗ, ಬಾಲಕಿಯು ಅಳುತ್ತಾ ತನ್ನ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾಳೆ. ಡಿಸೆಂಬರ್ 2ರಿಂದ ಆರೋಪಿಯು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಪೋಷಕರಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಈ ಕುರಿತು ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಬಿ.ಎನ್.ಎಸ್-2023ರ ಕಲಂ 115(2), 351(2), 65(1) ಹಾಗೂ ಪೋಕ್ಸೋ ಕಾಯ್ದೆ 2012ರ ಸೆಕ್ಷನ್ 4 ಮತ್ತು 6ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.







Comments