ಬೇರೆ ಜಾತಿ–ಧರ್ಮದ ವಿವಾಹ: ಮಗಳಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು
- sathyapathanewsplu
- Dec 20, 2025
- 1 min read

ಪ್ರೀತಿವಿವಾಹ ಅಥವಾ ಬೇರೆ ಜಾತಿ–ಧರ್ಮದ ವಿವಾಹ ಮಾಡಿದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸುಪ್ರೀಂ ಕೋರ್ಟ್ ಮಗಳು ತಂದೆಯ ಇಚ್ಛೆಗೆ ವಿರುದ್ಧವಾಗಿ ಪ್ರೀತಿವಿವಾಹ ಮಾಡಿದ್ದರೆ ಅಥವಾ ಬೇರೆ ಜಾತಿ/ಧರ್ಮದವನನ್ನು ಮದುವೆಯಾದರೆ, ತಂದೆ ತನ್ನ ಆಸ್ತಿಯ ವಿಲ್‌ನಿಂದ ಮಗಳನ್ನು ಹೊರಗಿಡುವ ಹಕ್ಕು ಹೊಂದಿದ್ದಾನೆ ಎಂದು ಮಹತ್ವದ ತೀರ್ಪು ನೀಡಿದೆ. ಇಂತಹ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ, ಕೇರಳ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ಆ ನ್ಯಾಯಾಲಯಗಳು ಶೈಲಾ ಜೋಸೆಫ್ ಅವರಿಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಇತರ ಸಹೋದರರೊಂದಿಗೆ ಸಮಾನ ಪಾಲು ನೀಡಬೇಕು ಎಂದು ಆದೇಶಿಸಿದ್ದವು.
ಈ ಪ್ರಕರಣದಲ್ಲಿ ಶೈಲಾ ಜೋಸೆಫ್ ಅವರು ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಈ ಕಾರಣದಿಂದ ತಂದೆ ಎನ್.ಎಸ್. ಶ್ರೀಧರನ್ ಅವರು ಮಗಳೊಂದಿಗೆ ಸಂಬಂಧ ಕಡಿದುಕೊಂಡು, ತಮ್ಮ ವಿಲ್‌ನಲ್ಲಿ ಆಕೆಗೆ ಯಾವುದೇ ಆಸ್ತಿ ಪಾಲು ನೀಡಿರಲಿಲ್ಲ. ತಂದೆಯ ನಿಧನದ ಬಳಿಕ ಶೈಲಾ ಅವರು ತಮ್ಮ ಪಾಲಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಕೆಳ ನ್ಯಾಯಾಲಯಗಳು ವಿಲ್ ಬಗ್ಗೆ ಸಂಶಯ ವ್ಯಕ್ತಪಡಿಸಿ, ಮಗಳಿಗೆ ಆಸ್ತಿಯಲ್ಲಿ ಹಕ್ಕು ಇದೆ ಎಂದು ತೀರ್ಪು ನೀಡಿದ್ದವು. ಆದರೆ, ಸುಪ್ರೀಂ ಕೋರ್ಟ್ ಈ ವಿಲ್ ಕಾನೂನುಬದ್ಧವಾಗಿದ್ದು, ತಂದೆಯ ಇಚ್ಛೆಯಂತೆ ಆಸ್ತಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ವಿಲ್‌ನಲ್ಲೇ ಮಗಳಿಗೆ ಪಾಲು ನಿರಾಕರಿಸಿರುವುದರಿಂದ, ಆಕೆಗೆ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಅಂತಿಮವಾಗಿ ತೀರ್ಪು ನೀಡಿದೆ.






Comments