ಯಶವಂತಪುರ–ಮಂಗಳೂರು ವಂದೇ ಭಾರತ್ 2ನೇ ಟ್ರಯಲ್ ರನ್ ಯಶಸ್ವಿ: ನಿಗದಿತ ಸಮಯಕ್ಕೂ ಮುನ್ನ ಸಂಚಾರ ಪೂರ್ಣ!

ಬೆಂಗಳೂರು: ಬಹುನಿರೀಕ್ಷಿತ ಯಶವಂತಪುರ ಹಾಗೂ ಮಂಗಳೂರು ಜಂಕ್ಷನ್ ನಡುವಿನ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ 2ನೇ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಯಶಸ್ವಿಯಾಗಿ ಪೂರ್ಣಗೊಂಡಿದೆ. ದಕ್ಷಿಣ ಪಶ್ಚಿಮ ರೈಲ್ವೆಯ ತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಪ್ರಯಾಣದಲ್ಲಿ ಪಾಲ್ಗೊಂಡು ರೈಲಿನ ಸಂಚಾರ ಸಮಯ, ಕಾರ್ಯಾಚರಣೆ ಹಾಗೂ ಸುರಕ್ಷತಾ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಘಾಟ್ ಪ್ರದೇಶದಲ್ಲಿ ವಿದ್ಯುತ್ ಮತ್ತು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ರೈಲಿನ ವೇಗವನ್ನು ಪರೀಕ್ಷಿಸಿದ್ದು, ಈ ಬಾರಿಯ ಟ್ರಯಲ್ ರನ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪಿದೆ. ಮೊದಲ ಟ್ರಯಲ್ ವೇಳೆ ಘಾಟ್ ಭಾಗದಲ್ಲಿ ಎದುರಾಗಿದ್ದ ಪ್ಯಾಂಟೋಗ್ರಾಫ್ ತಾಂತ್ರಿಕ ತೊಡಕುಗಳನ್ನು ಈ ಬಾರಿ ಸರಿಪಡಿಸಲಾಗಿದೆ.
ಇದೇ ವೇಳೆ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗೆ 'ಕಬಕ-ಪುತ್ತೂರು' ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ತಾತ್ಕಾಲಿಕ ನಿಲುಗಡೆ ನೀಡಲಾಗಿದ್ದು, ಇದನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸ್ವಾಗತಿಸಿದ್ದಾರೆ. ರೈಲಿನ ವೇಳಾಪಟ್ಟಿಯಲ್ಲೂ ಅಗತ್ಯ ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಕರಾವಳಿ ಭಾಗದ ಪ್ರಯಾಣಿಕರಲ್ಲಿ ಈ ಆಧುನಿಕ ರೈಲು ಸೇವೆ ಹೆಚ್ಚಿನ ಆಶಾದಾಯಕ ವಾತಾವರಣ ನಿರ್ಮಿಸಿದೆ.







Comments