ರಾಜ್ಯದಲ್ಲಿ ಜೂನ್ 30ರಿಂದ ಮತದಾರರ ಪಟ್ಟಿ ಪರಿಷ್ಕರಣೆ: ಕ್ಯೂಆರ್ ಕೋಡ್ ವಿಶೇಷತೆ

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ದಿನಾಂಕ ಘೋಷಣೆಯಾಗಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಆರಂಭವಾಗಲಿದ್ದು, ಜೂನ್ 30ರಿಂದ ಜುಲೈ 29ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಒಟ್ಟು 5.55 ಕೋಟಿ ಮತದಾರರನ್ನು ಪರಿಷ್ಕರಣೆಗೆ ಒಳಪಡಿಸಲಾಗುತ್ತಿದ್ದು, ಪ್ರತಿ ಮತದಾರರಿಗೂ ಪ್ರತ್ಯೇಕ 'ಕ್ಯೂಆರ್ ಕೋಡ್' ಇರುವ ಗಣತಿ ನಮೂನೆಯನ್ನು ನೀಡಲಾಗುವುದು. ಅಧಿಕಾರಿಗಳು ನೀಡುವ 2 ಸೆಟ್ ನಮೂನೆಗಳಲ್ಲಿ ಒಂದನ್ನು ಸಾರ್ವಜನಿಕರು ಭರ್ತಿ ಮಾಡಿ ಮರಳಿ ನೀಡಬೇಕು, ಮತ್ತೊಂದನ್ನು ಸಾಕ್ಷಿಗಾಗಿ ತಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಅರ್ಹತೆಗಾಗಿ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಂಡಿರಬೇಕು.
ಇನ್ನು 2002ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಕಡ್ಡಾಯವಾಗಿ ಮರುಪರಿಶೀಲಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ 'ವೋಟರ್ ಫೆಸಿಲಿಟಿ ಸೆಂಟರ್' ತೆರೆಯಲಾಗುವುದು. ಆಗಸ್ಟ್ 8 ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾಗಲಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಅಂತಿಮವಾಗಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.







Comments