ವಿವಾಹಿತ ಪುತ್ರಿಯರಿಗೂ ತಂದೆಯ ಗೇಣಿ ಆಸ್ತಿಯಲ್ಲಿ ಸಮಾನ ಪಾಲು; ಹೈಕೋರ್ಟ್ ಮಹತ್ವದ ತೀರ್ಪು

ಧಾರವಾಡ: ವಿವಾಹವಾದ ಬಳಿಕವೂ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕು ಮುಂದುವರಿಯುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಕುಟುಂಬದ ಮುಖ್ಯಸ್ಥರಿಗೆ ಗೇಣಿ ಆಧಾರದ ಮೇಲೆ ಮಂಜೂರಾದ ಜಮೀನಿನಲ್ಲಿಯೂ ವಿವಾಹಿತ ಪುತ್ರಿಯರು ಪಾಲು ಪಡೆಯಲು ಅರ್ಹರು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದ ಆಸ್ತಿ ವಿವಾದದ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಕೆಳಹಂತದ ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ವಿವಾಹಿತ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ
ತವರಮೆಳ್ಳಿಹಳ್ಳಿ ಗ್ರಾಮದ ಶಿವಪ್ಪ ಮತ್ತು ಅವರ ಸಹೋದರ ರುದ್ರಪ್ಪ ಗೇಣಿದಾರರಾಗಿದ್ದರು. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಭೂ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ ಬಳಿಕ ಜಮೀನು ಅವರ ಹೆಸರಿಗೆ ಮಂಜೂರಾಗಿತ್ತು.
ಶಿವಪ್ಪ ಮೃತಪಟ್ಟ ಬಳಿಕ ಅವರ ಪತ್ನಿ, ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಜಮೀನಿನ ಜಂಟಿ ಸ್ವಾಧೀನದಲ್ಲಿದ್ದರು. ಬಳಿಕ ಪುತ್ರ ಬಸವರಾಜ್ ಕೂಡ ಮೃತಪಟ್ಟಿದ್ದು, ಜಮೀನಿನ ಹಕ್ಕು ಮತ್ತು ಪಾಲಿನ ವಿಚಾರದಲ್ಲಿ ಕುಟುಂಬದ ಸದಸ್ಯರ ನಡುವೆ ವಿವಾದ ಉಂಟಾಯಿತು.
ವಿವಾಹಿತ ಪುತ್ರಿಯರಿಗೆ ಜಮೀನಿನಲ್ಲಿ ಪಾಲು ನೀಡುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು.
ಸಿವಿಲ್ ಕೋರ್ಟ್‌ನಲ್ಲಿ ಪುತ್ರಿಯರಿಗೆ ಜಯ
ತಮಗೆ ಸಿಗಬೇಕಾದ ಆಸ್ತಿ ಪಾಲು ನೀಡಿಲ್ಲ ಎಂದು ಆರೋಪಿಸಿ ಶಿವಪ್ಪ ಅವರ ಪುತ್ರಿಯರು ಶಿಗ್ಗಾಂವಿಯ ಸಿವಿಲ್ ನ್ಯಾಯಾಲಯದ ಮೊರೆ ಹೋದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಪುತ್ರಿಯರಿಗೂ ಜಮೀನಿನಲ್ಲಿ ಕಾನೂನುಬದ್ಧ ಪಾಲು ಇದೆ ಎಂದು ತೀರ್ಮಾನಿಸಿ, ಅರ್ಜಿದಾರರಿಗೆ ತಲಾ 1/7ರಷ್ಟು ಪಾಲು ನೀಡುವಂತೆ ಆದೇಶಿಸಿತು.
ಈ ತೀರ್ಪನ್ನು ಪ್ರಶ್ನಿಸಿ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾ ನ್ಯಾಯಾಲಯವೂ ಸಿವಿಲ್ ಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತು.
ಹೈಕೋರ್ಟ್‌ನಲ್ಲೂ ತೀರ್ಪು ಬದಲಾವಣೆಯಾಗಿಲ್ಲ
ನಂತರ ಪ್ರಕರಣ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಬಂದಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಮುರಳೀಧರ ಪೈ ಅವರ ಏಕಸದಸ್ಯ ಪೀಠವು ಕೆಳಹಂತದ ನ್ಯಾಯಾಲಯಗಳ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಭೂ ನ್ಯಾಯ ಮಂಡಳಿಯಿಂದ ಕುಟುಂಬದ ಮುಖ್ಯಸ್ಥನಿಗೆ ಗೇಣಿ ಆಧಾರದ ಮೇಲೆ ಜಮೀನು ಮಂಜೂರಾದ ಸಂದರ್ಭದಲ್ಲಿ, ಆ ಹಕ್ಕು ಕೇವಲ ವ್ಯಕ್ತಿಯ ವೈಯಕ್ತಿಕ ಹಕ್ಕಾಗಿರದೆ, ಕೆಲವು ಸಂದರ್ಭಗಳಲ್ಲಿ ಅವಿಭಕ್ತ ಕುಟುಂಬದ ಪ್ರಯೋಜನಕ್ಕೆ ಸಂಬಂಧಿಸಿದ ಹಕ್ಕಾಗಿರಬಹುದು ಎಂಬ ಕಾನೂನು ತತ್ವವನ್ನು ನ್ಯಾಯಪೀಠ ಪರಿಗಣಿಸಿದೆ.
ತಂದೆಯ ಮರಣದ ಬಳಿಕ ಗಂಡು ಮಕ್ಕಳಿಗೆ ಮಾತ್ರ ಜಮೀನಿನ ಹಕ್ಕು ಸೀಮಿತವಾಗುವುದಿಲ್ಲ. ಅನ್ವಯಿಸುವ ಹಿಂದೂ ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ ವಿವಾಹಿತ ಪುತ್ರಿಯರೂ ತಮ್ಮ ಕಾನೂನುಬದ್ಧ ಪಾಲನ್ನು ಪಡೆಯಲು ಅರ್ಹರು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅಂತಿಮವಾಗಿ, ಪುತ್ರಿಯರಿಗೆ ಪಾಲು ನೀಡಿದ್ದ ಕೆಳಹಂತದ ನ್ಯಾಯಾಲಯಗಳ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.







Comments