ವಿಟ್ಲ: ಅಕ್ರಮ ಪಡಿತರ ಅಕ್ಕಿ ವಶ; ಓರ್ವನ ಬಂಧನ

ವಿಟ್ಲದ ಶಿವಾಜಿ ನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಇರಿಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಮತ್ತು ವಿಟ್ಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮನೆಯಂಗಳದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿದ್ದ ಅಕ್ಕಿಯನ್ನು ಪತ್ತೆಹಚ್ಚಿದ್ದಾರೆ.
ಪರಿಶೀಲನೆಯಲ್ಲಿ ಆಟೋರಿಕ್ಷಾದಲ್ಲಿದ್ದ 15 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 679.38 ಕೆಜಿ ತೂಕದ ಪಡಿತರ ಅಕ್ಕಿ ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ ₹23,098 ಎಂದು ತಿಳಿದುಬಂದಿದ್ದು, ಅಕ್ಕಿಯ ಜೊತೆಗೆ ಸಾಗಾಟಕ್ಕೆ ಬಳಸುತ್ತಿದ್ದ ಆಟೋರಿಕ್ಷಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಿಟ್ಲ ಕಸಬಾ ನಿವಾಸಿ ಅಲಿ ಅಕ್ಟರ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







Comments