ವಿಟ್ಲದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಪವಾಡ ಸದೃಶವಾಗಿ ಪಾರಾದ ಕುಟುಂಬ, ಮನೆ ಸಂಪೂರ್ಣ ಹಾನಿ

ವಿಟ್ಲ: ಕಸಬಾ ಗ್ರಾಮದ ಕುರುಂಬಳ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆ ಸಂಪೂರ್ಣವಾಗಿ ಜಖಂಗೊಂಡು ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ದುರಂತ ಘಟನೆ ನಡೆದಿದೆ.
ಕುರುಂಬಳ ನಿವಾಸಿ ಇಸುಬು ಬ್ಯಾರಿ ಅವರ ಪುತ್ರ ಕೆ. ಹಮೀದ್ (49) ಅವರ ಮನೆಯಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದೆ. ಘಟನೆ ಸಂಭವಿಸಿದ ವೇಳೆ ಹಮೀದ್ ಅವರು ಪೇಟೆಗೆ ತೆರಳಿದ್ದರೆ, ಅವರ ಪತ್ನಿ ಖೈರುನ್ನಿಸಾ ಅವರು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರು.

ಈ ವೇಳೆ ಏಕಾಏಕಿ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣುತ್ತಿದ್ದಂತೆಯೇ ಖೈರುನ್ನಿಸಾ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದು, ನೆರೆಯ ನಿವಾಸಿ ಉಮ್ಮರ್ ತೋಟದಿಂದ ಓಡಿಬಂದು ಮನೆಯಲ್ಲಿದ್ದ ಮೂವರನ್ನೂ ತಕ್ಷಣ ಹೊರಗೆ ಕರೆದುಕೊಂಡು ಹೋಗಿ ರಕ್ಷಿಸಿದ್ದಾರೆ.
ಕುಟುಂಬದವರು ಸುರಕ್ಷಿತವಾಗಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡು ಚಿದ್ರಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಾಖಲೆಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಭಸ್ಮಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಇಂಡೇನ್ ಗ್ಯಾಸ್ ವಿತರಕರಾದ ಸಾಯಿ ಗಣೇಶ್ ಸಂಸ್ಥೆಯ ಮಾಲಿಕ ಸತೀಶ ಆಳ್ವ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಪವಾಡ ಸದೃಶ ಎಂದು ಸ್ಥಳೀಯರು ಹೇಳಿದ್ದಾರೆ.







Comments