ಕುಟ್ರುಪ್ಪಾಡಿಯಲ್ಲಿ ದಾರುಣ ಘಟನೆ: ಡ್ಯಾಂನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಸಾವು

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರಿಯುವ ಗುಂಡ್ಯ ಹೊಳೆಯ ಕೊಲ್ಯದಕಟ್ಟ ಡ್ಯಾಂ ಬಳಿ ಶುಕ್ರವಾರ ಸಂಜೆ ಸಂಭವಿಸಿದ ದಾರುಣ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತಾ (21) ಹಾಗೂ ಸುನೀತಾ (15) ಎಂದು ಗುರುತಿಸಲಾಗಿದೆ.
ರಜೆ ಹಿನ್ನೆಲೆಯಲ್ಲಿ ಐವರು ವಿದ್ಯಾರ್ಥಿನಿಯರು ಸ್ನೇಹಿತರೊಂದಿಗೆ ಡ್ಯಾಂ ಬಳಿ ತೆರಳಿ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಅರ್ಪಿತಾ ಮತ್ತು ಸುನೀತಾ ಅವರು ನೀರಿನ ಆಳವನ್ನು ಅಂದಾಜಿಸದೆ ಮುಂದೆ ಸಾಗಿದ್ದು, ಏಕಾಏಕಿ ಮುಳುಗತೊಡಗಿದ್ದಾರೆ.
ಜೊತೆಯಲ್ಲಿದ್ದ ಸ್ನೇಹಿತೆಯರು ಅವರನ್ನು ರಕ್ಷಿಸಲು ಹರಸಾಹಸಪಟ್ಟರೂ, ಮೇಲಕ್ಕೆತ್ತಲು ಸಾಧ್ಯವಾಗದೆ ದುರ್ಘಟನೆ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ರಜೆ ದಿನದ ಸಂತಸ ಕ್ಷಣವೇ ಕ್ಷಣಾರ್ಧದಲ್ಲಿ ಶೋಕ ಸಾಗರವಾಗಿ ಮಾರ್ಪಟ್ಟಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.







Comments