ತೆರಿಗೆ ಸಂಗ್ರಹಣೆಯಲ್ಲಿ ಕಡಬ ತಾಲೂಕು ರಾಜ್ಯಕ್ಕೇ ಪ್ರಥಮ: ಶೇ. 103 ರಷ್ಟು ಗುರಿ ಸಾಧಿಸಿ ಐತಿಹಾಸಿಕ ದಾಖಲೆ
- Mar 4
- 1 min read

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ತೆರಿಗೆ ಸಂಗ್ರಹಣೆಯಲ್ಲಿ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಹೊಸ ತಾಲೂಕಾಗಿ ಘೋಷಣೆಯಾದ ದಿನದಿಂದಲೂ ತೆರಿಗೆ ಸಂಗ್ರಹದಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಕಡಬ, ಈ ಆರ್ಥಿಕ ವರ್ಷದಲ್ಲೂ ತನ್ನ ಗುರಿಯನ್ನು ಮೀರಿ ಸಾಧನೆ ಮಾಡಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ. ತಾಲೂಕಿನ ಎಲ್ಲಾ 21 ಗ್ರಾಮ ಪಂಚಾಯತ್‌ಗಳು ಶೇ. 100 ರಷ್ಟು ಪ್ರಗತಿ ಸಾಧಿಸಿರುವುದು ಈ ಬಾರಿಯ ವಿಶೇಷವಾಗಿದೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಒಟ್ಟು 21 ಗ್ರಾಮ ಪಂಚಾಯತ್‌ಗಳಿಂದ ₹3.34 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ಅಧಿಕಾರಿಗಳ ಮತ್ತು ಸಾರ್ವಜನಿಕರ ಸಹಕಾರದಿಂದ ಈಗಾಗಲೇ ₹3.41 ಕೋಟಿಗಿಂತಲೂ ಅಧಿಕ ಮೊತ್ತ ಸಂಗ್ರಹವಾಗಿದ್ದು, ಒಟ್ಟಾರೆ ಶೇ. 103 ರಷ್ಟು ಸಾಧನೆಯಾಗಿದೆ. ಇದರಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಒಂದರಿಂದಲೇ ₹1 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದ್ದು, ನೆಲ್ಯಾಡಿ (₹33 ಲಕ್ಷ), ಕೌಕ್ರಾಡಿ (₹29 ಲಕ್ಷ) ಹಾಗೂ ರಾಮಕುಂಜ (₹20 ಲಕ್ಷ) ಪಂಚಾಯತ್‌ಗಳು ಕೂಡ ಗಮನಾರ್ಹ ಕೊಡುಗೆ ನೀಡಿವೆ.
ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಕಡಬದ ಸಾಧನೆ ಅಪಾರವಾಗಿದೆ. ಜಿಲ್ಲಾವಾರು ಪ್ರಗತಿಯಲ್ಲಿ ಕಡಬ ಶೇ. 103 ರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೂಡುಬಿದ್ರೆ (ಶೇ. 99), ಉಳ್ಳಾಲ (ಶೇ. 96) ಮತ್ತು ಸುಳ್ಯ (ಶೇ. 95) ನಂತರದ ಸ್ಥಾನಗಳಲ್ಲಿವೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 92 ರಷ್ಟು ತೆರಿಗೆ ಸಂಗ್ರಹವಾಗಿದ್ದು, ಕಡಬದ ಈ ಅಪ್ರತಿಮ ಸಾಧನೆಯು ಇತರ ತಾಲೂಕುಗಳಿಗೆ ಮಾದರಿಯಾಗಿದೆ. ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು ಮತ್ತು ಮನೆಗಳಿಂದ ಕಾನೂನುಬದ್ಧವಾಗಿ ತೆರಿಗೆ ವಸೂಲಿ ಮಾಡುವಲ್ಲಿ ಪಂಚಾಯತ್‌ಗಳು ತೋರಿದ ಆಸಕ್ತಿಯೇ ಈ ಯಶಸ್ಸಿಗೆ ಕಾರಣವಾಗಿದೆ.







Comments