ತಮಿಳುನಾಡು ಮತ ಎಣಿಕೆಯಲ್ಲಿ ಅಚ್ಚರಿಯ ತಿರುವು: ಡಿಎಂಕೆ ಹಿಂದಿಕ್ಕಿ ಟಿವಿಕೆ ಮುನ್ನಡೆ!

ಇಂದು (ಮೇ 4) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಜೋರಾಗಿ ಸಾಗುತ್ತಿದ್ದು, ತಮಿಳುನಾಡುದಲ್ಲಿ ರಾಜಕೀಯ ಚಿತ್ರಣ ಅಚ್ಚರಿಯ ತಿರುವು ಪಡೆದುಕೊಂಡಿದೆ.
ಆರಂಭಿಕ ಹಂತದಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಇದೀಗ ವೇಗವಾಗಿ ಮುನ್ನಡೆ ಸಾಧಿಸಿದ್ದು, ಬೆಳಗ್ಗೆ ಸುಮಾರು 9.15ರ ವೇಳೆಗೆ 58 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದರಿಂದ ರಾಜ್ಯದ ರಾಜಕೀಯದಲ್ಲಿ ಹೊಸ ಸಮೀಕರಣಗಳು ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನೊಂದೆಡೆ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 47 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) 28 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.
ಈ ಆರಂಭಿಕ ಟ್ರೆಂಡ್‌ಗಳು ತಮಿಳುನಾಡಿನಲ್ಲಿ ಬಲಿಷ್ಠ ಪಕ್ಷವೆಂದು ಪರಿಗಣಿಸಲ್ಪಟ್ಟ ಡಿಎಂಕೆಗೆ ಹಿನ್ನಡೆಯ ಸೂಚನೆ ನೀಡುತ್ತಿದ್ದು, ಟಿವಿಕೆ ಅಚ್ಚರಿಯ ರೀತಿಯಲ್ಲಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ.
ಒಟ್ಟು 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕನಿಷ್ಠ 118 ಸ್ಥಾನಗಳ ಅಗತ್ಯವಿದೆ. ಪ್ರಸ್ತುತ ಮುನ್ನಡೆಗಳನ್ನು ಗಮನಿಸಿದರೆ ಮುಂದಿನ ಗಂಟೆಗಳಲ್ಲಿ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಈ ನಡುವೆ, ವಿಜಯ್ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿಯೂ ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಆರಂಭದಲ್ಲಿ ಪೆರಂಬೂರು ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಈಗ ತಾವು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿರುವುದು ಟಿವಿಕೆ ಬೆಂಬಲಿಗರಲ್ಲಿ ಉತ್ಸಾಹ ಹೆಚ್ಚಿಸಿದೆ.







Comments