ಮೂರು ಗಂಟೆಗಳ ಕಾಲ ಸುಳ್ಯ ನಗರ ಬ್ಲಾಕ್: ಸಾರ್ವಜನಿಕರಿಗೆ ತೀವ್ರ ತೊಂದರೆ — ತುರ್ತು ಸೇವೆಗಳಿಗೂ ಅಡ್ಡಿಯಾಗಿದ್ದರೆ ಹೊಣೆ ಯಾರು?

ಸುಳ್ಯ: ಸುಮಾರು 500 ಮಂದಿಯ ಮೆರವಣಿಗೆಗಾಗಿ ಸುಳ್ಯ ನಗರದ ಪ್ರಮುಖ ರಸ್ತೆಯೇ ಸುಮಾರು ಮೂರು ಗಂಟೆಗಳ ಕಾಲ ಬಂದ್ ಆಗಿದ್ದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾದ ಘಟನೆ ಸೆ.11ರಂದು ನಡೆದಿದೆ. ಯಾವುದೇ ಪರ್ಯಾಯ ಮಾರ್ಗದ ವ್ಯವಸ್ಥೆಯಿಲ್ಲದೆ ಮುಖ್ಯ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು.
ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾಲ್ನಡಿಗೆ ಜಾಥಾ ಹಾಗೂ ದಫ್ ಪ್ರದರ್ಶನ ಸಂಜೆ 4 ಗಂಟೆಗೆ ನಿಗದಿಯಾಗಿತ್ತು. ಆದರೆ ಮೆರವಣಿಗೆ ರಾತ್ರಿ 7.30ರವರೆಗೂ ಮುಂದುವರಿದ ಪರಿಣಾಮ ಈ ಅವಧಿಯಲ್ಲಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿತು.

ಮೆರವಣಿಗೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕಿಕೊಂಡರು. ಗ್ರಾಮೀಣ ಭಾಗಗಳಿಗೆ ತೆರಳಬೇಕಿದ್ದ ಹಲವು ವಿದ್ಯಾರ್ಥಿಗಳು ಕತ್ತಲಾದ ಬಳಿಕ ಮನೆ ತಲುಪುವಂತಾಯಿತು. ಇದರಿಂದ ಪೋಷಕರಲ್ಲೂ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ಇನ್ನು, ತುರ್ತು ಆರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ತೆರಳಬೇಕಾದವರು ಇದೇ ರೀತಿಯ ಸಂಚಾರ ತಡೆಗೆ ಸಿಲುಕಿಕೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಅಡ್ಡಿಯಾದರೆ ಅದರಿಂದ ಸಂಭವಿಸಬಹುದಾದ ಅನಾಹುತಗಳಿಗೆ ಹೊಣೆ ಯಾರು ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ಸುಳ್ಯದಲ್ಲಿ ಈ ಹಿಂದೆ ಹಲವು ಧಾರ್ಮಿಕ ಹಾಗೂ ಸಾರ್ವಜನಿಕ ಮೆರವಣಿಗೆಗಳು ನಡೆದಿವೆ. ಮಂಗಳವಾರವೂ ಮೊಸರು ಕುಡಿಕೆ ಮೆರವಣಿಗೆ ನಡೆದಿತ್ತು. ಹಿಂದಿನ ಹಲವು ಕಾರ್ಯಕ್ರಮಗಳನ್ನು ಸಾರ್ವಜನಿಕರ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗದಂತೆ ಸುಸೂತ್ರವಾಗಿ ನಡೆಸಲಾಗಿತ್ತು. ಆದರೆ ಸೆ.11ರಂದು ನಡೆದ ಮೆರವಣಿಗೆಯ ಸಂದರ್ಭದಲ್ಲಿ ನಗರವೇ ಸುಮಾರು ಮೂರು ಗಂಟೆಗಳ ಕಾಲ ಬ್ಲಾಕ್ ಆಗಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮೆರವಣಿಗೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಕ್ಕೆ ಸಾರ್ವಜನಿಕರ ವಿರೋಧವಿಲ್ಲ. ಆದರೆ ಇಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ಮಾರ್ಗ, ತುರ್ತು ವಾಹನಗಳ ಸಂಚಾರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯ. ಯಾವುದೇ ಮುನ್ನೆಚ್ಚರಿಕಾ ವ್ಯವಸ್ಥೆಯಿಲ್ಲದೆ ಮುಖ್ಯ ರಸ್ತೆಯನ್ನೇ ಗಂಟೆಗಟ್ಟಲೆ ಬಂದ್ ಮಾಡುವ ಪರಿಸ್ಥಿತಿ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ







Comments