ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಆನೆ ಮರಿ ಸಾವು

ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಪ್ರಾಯದ ಆನೆ ಮರಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಹರ್ಲಡ್ಕದ ಚಂದ್ರಶೇಖರ ಎಂಬವರ ತೋಟದಲ್ಲಿ ಆನೆ ಮರಿ ಮೃತಪಟ್ಟಿದ್ದು, ಭಾಗಮಂಡಲ ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಕೃಷಿಗೆ ಹಾನಿ ಮಾಡಿದೆ ಎನ್ನಲಾಗಿದೆ.
ತೋಟವು ಎತ್ತರ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ಕಾಡಾನೆಗಳ ಹಿಂಡು ಮರಳಿ ಕಾಡಿನತ್ತ ತೆರಳುವ ವೇಳೆ ಆನೆ ಮರಿ ಜಾರಿ ಬಿದ್ದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ ಮೆಟ್ಟಿದ ಪರಿಣಾಮ ಅದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಆದರೆ ಆನೆ ಮರಿಯ ಸಾವಿಗೆ ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ನಿರೀಕ್ಷೆಯಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಕಾಡಾನೆಗಳ ಹಾವಳಿಯಿಂದ ಕೃಷಿಗೆ ಹಾನಿಯಾಗುತ್ತಿರುವ ಬೆನ್ನಲ್ಲೇ ಆನೆ ಮರಿ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.







Comments