;
top of page

Big Breaking | ಸುಳ್ಯದಲ್ಲಿ ವಿದ್ಯುತ್ ಶಾಕ್‌ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ

Oct 13
1 min read


ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ವಿದ್ಯುತ್ ಶಾಕ್‌ಗೆ ಬಲಿಯಾಗಿರುವ ದಾರುಣ ಘಟನೆ ಅಕ್ಟೋಬರ್ 12ರ ರಾತ್ರಿ ನಡೆದಿದೆ. ತೋಡಿನ ಪಕ್ಕದ ಅಡಿಕೆ ತೋಟಕ್ಕೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.


ಮೃತರನ್ನು ಕಲ್ಮಡ್ಕ ನಿವಾಸಿ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವರೊಂದಿಗೆ ತೆರಳಿದ್ದ ಅಪ್ರಾಪ್ತ ಬಾಲಕನಿಗೂ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ತೋಡಿನಲ್ಲಿ ಮೀನು ಹಿಡಿಯುವಾಗ ದುರಂತ


ಪೊಲೀಸ್ ಮಾಹಿತಿಯಂತೆ, ಭರತ್, ರಮೇಶ್ ಹಾಗೂ ಅಪ್ರಾಪ್ತ ಬಾಲಕ ಕಲ್ಮಡ್ಕ ಗ್ರಾಮದ ‘ಹೊಳೆಕ್ಕೆರೆ’ ಪ್ರದೇಶದ ತೋಡಿನಲ್ಲಿ ಮೀನು ಹಿಡಿಯುತ್ತಾ ಸಾಗುತ್ತಿದ್ದರು. ತೋಡಿನ ಪಕ್ಕದಲ್ಲಿದ್ದ ಅಡಿಕೆ ತೋಟಕ್ಕೆ ಕಾಡುಪ್ರಾಣಿಗಳ ಉಪಟಳ ತಡೆಯುವ ಉದ್ದೇಶದಿಂದ ವಿದ್ಯುತ್ ತಂತಿ ಅಳವಡಿಸಲಾಗಿತ್ತು ಎನ್ನಲಾಗಿದೆ.


ಈ ತಂತಿಯಿಂದ ತೋಡಿನ ನೀರಿಗೂ ವಿದ್ಯುತ್ ಪ್ರವಹಿಸಿದ್ದು, ನೀರಿನಲ್ಲಿದ್ದ ಭರತ್ ಮತ್ತು ರಮೇಶ್‌ಗೆ ತೀವ್ರ ವಿದ್ಯುತ್ ಆಘಾತ ಸಂಭವಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಾಲಕನಿಗೂ ಶಾಕ್ ತಗುಲಿ ಗಾಯಗಳಾಗಿವೆ.


ಆಸ್ಪತ್ರೆಗೆ ಸಾಗಿಸಿದರೂ ಉಳಿಯದ ಜೀವ


ಘಟನೆಯ ಬಳಿಕ ಬಾಲಕ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ತಕ್ಷಣ ಇಬ್ಬರು ಯುವಕರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಭರತ್ ಹಾಗೂ ರಮೇಶ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗಾಯಗೊಂಡ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.


ತೋಟದ ಮಾಲೀಕನ ವಿರುದ್ಧ ಪ್ರಕರಣ


ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಅಳವಡಿಸಿದ್ದ ಆರೋಪದಡಿ ತೋಟದ ಮಾಲೀಕ ಮಧುಸೂದನ್ ಭಟ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಪರಾಧ ಕ್ರಮಾಂಕ 59/2026ರಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 105 ಹಾಗೂ ವಿದ್ಯುತ್ ಕಾಯ್ದೆಯ 135(1)(E) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page