ಸುಳ್ಯ: ಕೋಟಿ ವೆಚ್ಚದ ಮೀನು ಮಾರುಕಟ್ಟೆಗೆ ಬೀಗ – ನಿಗೂಢ ಮೌನದಲ್ಲಿ ನಗರ ಪಂಚಾಯತ್ ಮತ್ತು ಜನಪ್ರತಿನಿಧಿಗಳು

ಸುಳ್ಯ: ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆ ಕಳೆದ 8–9 ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡಿದೆ. ಕಟ್ಟಡ ಸಿದ್ಧವಾಗಿದೆ, ಮಾರುಕಟ್ಟೆ ಇದೆ, ವ್ಯಾಪಾರಿಗಳೂ ಇದ್ದಾರೆ. ಆದರೆ ವ್ಯಾಪಾರ ಮಾತ್ರ ನಡೆಯುತ್ತಿಲ್ಲ! ಹಾಗಾದರೆ ಸಮಸ್ಯೆ ಏನು?
ನಗರ ಪಂಚಾಯತ್ ನಿಗದಿಪಡಿಸಿರುವ ಹರಾಜು ಮೊತ್ತಕ್ಕೂ ವ್ಯಾಪಾರಿಗಳ ಬೇಡಿಕೆಗೂ ಹೊಂದಾಣಿಕೆಯಾಗದ ಕಾರಣ ಮಾರುಕಟ್ಟೆ ಆರಂಭವಾಗದೆ ಉಳಿದಿದೆ. ಹರಾಜುದಾರರು ರಿಯಾಯಿತಿಗಾಗಿ ಮನವಿ ಮಾಡಿದರೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನು ಹೊರಗಿನ ಮೀನು ಮಾರಾಟಗಾರರಿಗೆ ವ್ಯಾಪಾರ ಮಾಡಲು ಅವಕಾಶವಿರುವಾಗ, ಸ್ಥಳೀಯ ಮಾರುಕಟ್ಟೆಗೆ ಮಾತ್ರ ಬೀಗ ಏಕೆ? ಹೊರಗಿನ ಮಾರಾಟಗಾರರು ನಗರ ಪಂಚಾಯತ್‌ಗೆ ಅಂಜಲ್ ತವಾ ಫ್ರೈ ಊಟ ಕೊಡುತ್ತಿದ್ದಾರೆಯೇ ಎಂಬ ವ್ಯಂಗ್ಯದ ಪ್ರಶ್ನೆಯನ್ನೂ ಮುಂದಿಡುವಂತಾಗಿದೆ!
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಸುಳ್ಯವನ್ನು ಮರೆತಂತಾಗಿದೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸುಳ್ಯಕ್ಕೆ ಹೊಸ ಯೋಜನೆಗಳು ಸಿಗಲಿಲ್ಲ ಎಂಬುದು ಒಂದು ಕಡೆಯ ನೋವಾದರೆ, ಈಗಾಗಲೇ ನಿರ್ಮಾಣವಾಗಿರುವ ಸಾರ್ವಜನಿಕ ಆಸ್ತಿಯನ್ನೇ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು ಮತ್ತೊಂದು ವಿಪರ್ಯಾಸ!
ಹೊಸ ಯೋಜನೆಗಳಿಲ್ಲ, ಇರುವ ಯೋಜನೆಗಳಿಗೂ ಬೆಲೆಯಿಲ್ಲವೇ? ಕೋಟಿ ವೆಚ್ಚದ ಮೀನು ಮಾರುಕಟ್ಟೆ ಬಳಕೆಯಾಗದೆ ಬೀಗ ಹಾಕಿಕೊಂಡಿರುವಾಗ ಅಭಿವೃದ್ಧಿಯ ಮಾತುಗಳು ಯಾರಿಗಾಗಿ?
ಇಷ್ಟೆಲ್ಲಾ ನಡೆಯುತ್ತಿದ್ದರೂ ಶಾಸಕರು, ನಗರ ಪಂಚಾಯತ್ ಆಡಳಿತಾಧಿಕಾರಿಗಳು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳು ಮೌನವಾಗಿರುವುದೇಕೆ? ಸಾರ್ವಜನಿಕರ ಹಣದಲ್ಲಿ ನಿರ್ಮಿಸಿದ ಆಸ್ತಿಯನ್ನು ಹೀಗೆ ನಿರ್ಲಕ್ಷ್ಯಕ್ಕೆ ತಳ್ಳುವುದು ಯಾರ ಜವಾಬ್ದಾರಿ?
ಹೊಸ ಯೋಜನೆ ತರಲು ಸಾಧ್ಯವಾಗದಿದ್ದರೂ, ಇರುವ ಸಾರ್ವಜನಿಕ ಆಸ್ತಿಯನ್ನು ಉಳಿಸಿ, ಸಮರ್ಪಕವಾಗಿ ಬಳಸುವುದಾದರೂ ಸಾಧ್ಯವಾಗಲಿ. ಸುಳ್ಯಕ್ಕೆ ಬೇಕಿರುವುದು ಬರೀ ಕಟ್ಟಡಗಳಲ್ಲ, ಕಾರ್ಯರೂಪಕ್ಕೆ ಬರುವ ಅಭಿವೃದ್ಧಿ!
ಕೊನೆಯದಾಗಿ ಸುಳ್ಯ ಜನರ ಪ್ರಶ್ನೆ ಒಂದೇ – ಮೀನು ಮಾರುಕಟ್ಟೆಗೆ ಬೀಗ ತೆರೆಯುವವರು ಯಾರು? ಅಭಿವೃದ್ಧಿಯ ಹೆಸರಿನಲ್ಲಿ ಕಟ್ಟಿದ ಕಟ್ಟಡಕ್ಕೆ ಜೀವ ತುಂಬುವವರು ಯಾವಾಗ?







Comments