ಗಾಂಜಾ ಕೇಸ್ ಆರೋಪಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಬಿಎಸ್ ಸಿ ವಿದ್ಯಾರ್ಥಿ

ಧಾರವಾಡ: ಗಾಂಜಾ ಸೇವನೆ ಆರೋಪ ಹಾಗೂ ಪೊಲೀಸರ ಕಿರುಕುಳದ ಭೀತಿಯಿಂದ ಬಿಎಸ್‌ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ.



ಮೃತ ವಿದ್ಯಾರ್ಥಿಯನ್ನು ಆದಿತ್ಯ ಎಂದು ಗುರುತಿಸಲಾಗಿದೆ. ಆತ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದನು. ಗಾಂಜಾ ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಒಟ್ಟು 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆದಿತ್ಯನಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಆಗಿತ್ತು. ನಂತರ ವಿಚಾರಣೆ ಪೂರ್ಣಗೊಳಿಸಿ ಪೊಲೀಸರು ಅವನನ್ನು ಬಿಡುಗಡೆ ಮಾಡಿದ್ದರು.


ಆದರೆ ಮನೆಗೆ ಹಿಂತಿರುಗಿದ ಬಳಿಕವೂ ಪೊಲೀಸರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ನಿರಂತರ ಒತ್ತಡದಿಂದ ಮಾನಸಿಕವಾಗಿ ಬೇಸತ್ತ ಆದಿತ್ಯ ತೀವ್ರ ನಿರ್ಧಾರ ಕೈಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆ ಕುಟುಂಬದವರಲ್ಲಿ ಆಘಾತ ಮೂಡಿಸಿದೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಹೃದಯವಿದ್ರಾವಕವಾಗಿದ್ದು, ನ್ಯಾಯಕ್ಕಾಗಿ ಕುಟುಂಬದವರು ಆಗ್ರಹಿಸಿದ್ದಾರೆ.







Comments