ಸ್ನ್ಯಾಪ್‌ಚಾಟ್‌ನಲ್ಲಿ ಹುಡುಗಿ ಸೋಗು: ಪುತ್ತೂರು ನಿವಾಸಿಗೆ ₹4.84 ಲಕ್ಷ ವಂಚನೆ
- Jun 4
- 1 min read

ದಿನ ಕಳೆದಂತೆ ಸೈಬರ್ ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ನ್ಯಾಪ್‌ಚಾಟ್‌ನಲ್ಲಿ ಹುಡುಗಿಯ ಸೋಗಿನಲ್ಲಿ ಬಂದ ವಂಚಕನೊಬ್ಬ ಪುತ್ತೂರು ನಿವಾಸಿಗೆ ಬರೋಬ್ಬರಿ 4,84,203 ರೂಪಾಯಿ ವಂಚಿಸಿದ್ದಾನೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕನು ‘ಅನ್ನಪೂರ್ಣ ಗೌಡ’ ಎಂಬ ಹೆಸರಿನ ನಕಲಿ ಐಡಿ ಬಳಸಿ, ತಾನು ಬೆಂಗಳೂರಿನ ವಿಪ್ರೋ ಕಂಪನಿ ಉದ್ಯೋಗಿ ಎಂದು ನಂಬಿಸಿದ್ದನು. ಬಳಿಕ ವಾಟ್ಸಾಪ್ ಸಂಖ್ಯೆ ಪಡೆದು ನಿರಂತರ ಚಾಟಿಂಗ್ ಮಾಡಿದ್ದಲ್ಲದೆ, ತನಗೆ ಹಣಕಾಸಿನ ತೊಂದರೆ ಇದೆ ಎಂದು ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಹಣ ನೀಡಿದ ಬಳಿಕ ವಾಪಸ್ ಬರದಿದ್ದಾಗ ಸಂತ್ರಸ್ತರು ಸ್ನೇಹಿತರ ಸಹಾಯದಿಂದ ವಿಚಾರಿಸಿದ್ದು, ತಾನು ಇಷ್ಟು ದಿನ ಮಾತನಾಡಿದ್ದು ಹುಡುಗಿಯಲ್ಲ, ಹುಡುಗನ ಜೊತೆ ಎಂಬ ಅಸಲಿ ಸತ್ಯ ತಿಳಿದು ಶಾಕ್ ಆಗಿದ್ದಾರೆ. ಸದ್ಯ ಪೊಲೀಸರು ವಂಚಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.







Comments