ಶೇಣಿಯಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಸತ್ಯನಾರಾಯಣ ಪೂಜೆ

ಸುಳ್ಯ: ಚೊಕ್ಕಾಡಿ ಸಮೀಪದ ಶೇಣಿಯಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ (ರಿ.) ಆಶ್ರಯದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು 2026ರ ಸೆಪ್ಟೆಂಬರ್ 6ರ ಆದಿತ್ಯವಾರ ಬೆಳಿಗ್ಗೆ 9-00 ಗಂಟೆಗೆ ಜರುಗಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಶಿವ ಸುಬ್ರಹ್ಮಣ್ಯ ಭಟ್ ನಾಟಿಕೇರಿ ವಹಿಸಲಿದ್ದು, ಚೊಕ್ಕಾಡಿ ಶ್ರೀ ರಾಮ ದೇವಾಲಯದ ಅರ್ಚಕರಾದ ಶ್ರೀ ರಘುರಾಮ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಿ ವಿ. ಮುಖ್ಯ ಅತಿಥಿಗಳಾಗಿ ಹಾಗೂ ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಂಘದ ನಿರ್ದೇಶಕ ಶ್ರೀ ಜನಾರ್ಧನ ಚೂಂತಾರು ಮತ್ತು ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಹೇಮಾವತಿ ತಂಟೆಪ್ಪಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ರಾಮ ಸೇವಾ ಸಮಿತಿ ಚೊಕ್ಕಾಡಿಯ ಅಧ್ಯಕ್ಷ ಶ್ರೀ ಮಹೇಶ್ ಭಟ್ ಚೂಂತಾರು, ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮೊಕೇಸರ ಶ್ರೀ ಬಿ.ಕೆ. ಧರ್ಮಪಾಲ ಶೇಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ವಿವಿಧ ಸ್ಪರ್ಧೆಗಳು ಹಾಗೂ ಆಕರ್ಷಣೆ:
ವೇದಿಕೆ ಕಾರ್ಯಕ್ರಮದ ಜೊತೆಗೆ ಮಕ್ಕಳಿಗೆ ಕೃಷ್ಣವೇಷ, ಭಕ್ತಿಗೀತೆ, ಮ್ಯೂಸಿಕಲ್ ಚೇರ್, ಒಂಟಿ ಕಾಲಿನ ಓಟ, ಲಿಂಬೆ ಚಮಚ ಮತ್ತು ಮೂರು ಕಾಲಿನ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಪುರುಷರಿಗೆ ಎಣ್ಣೆ ಕಂಬ ಏರುವುದು ಹಾಗೂ ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ.
ವಿಶೇಷ ಆಕರ್ಷಣೆಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಮುಕ್ತ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಬೆಳಗಿನ ಸಿಹಿ ತಿಂಡಿ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ನೆರವೇರಲಿದೆ.







Comments