ರೇಷನ್ ಕಾರ್ಡ್ e-KYC ಇನ್ನು ಮನೆಯಲ್ಲೇ: ‘ಅನ್ನಸೇವೆ’ ಆ್ಯಪ್ ಮೂಲಕ 5 ನಿಮಿಷದಲ್ಲಿ ಪೂರ್ಣ

ಬೆಂಗಳೂರು: ಪಡಿತರ ಚೀಟಿ (ರೇಷನ್ ಕಾರ್ಡ್) ಫಲಾನುಭವಿಗಳಿಗೆ ಆಹಾರ ಇಲಾಖೆ ಗುಡ್‌ನ್ಯೂಸ್ ನೀಡಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ e-KYC ಪೂರ್ಣಗೊಳಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆಹಾರ ಇಲಾಖೆ ‘ಅನ್ನಸೇವೆ’ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ.
ಕೇಂದ್ರ ಸರ್ಕಾರದ ನಿಯಮದಂತೆ ರೇಷನ್ ಕಾರ್ಡ್ ಫಲಾನುಭವಿಗಳು ಐದು ವರ್ಷಕ್ಕೊಮ್ಮೆ e-KYC ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿಂದೆ e-KYCಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗಿರುವ ಫಲಾನುಭವಿಗಳಿಗೆ ಇದು ತೊಂದರೆಯಾಗುತ್ತಿತ್ತು.
ಇದೀಗ ‘ಅನ್ನಸೇವೆ’ ಆ್ಯಪ್ ಮೂಲಕ ಈ ಪ್ರಕ್ರಿಯೆಯನ್ನು ಮನೆಯಲ್ಲೇ ಪೂರ್ಣಗೊಳಿಸಬಹುದಾಗಿದೆ. ರೇಷನ್ ಕಾರ್ಡ್ ಹಾಗೂ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಸುಮಾರು ಐದು ನಿಮಿಷಗಳಲ್ಲಿ e-KYC ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊಬೈಲ್‌ನಲ್ಲಿ e-KYC ಮಾಡುವ ವಿಧಾನ
ಮೊದಲು ‘ಅನ್ನಸೇವೆ’ ಆ್ಯಪ್ ತೆರೆಯಬೇಕು.
ಲಾಗಿನ್ ಪ್ರಕಾರದಲ್ಲಿ ‘ಸ್ವಯಂ/ನಾಗರಿಕ’ ಆಯ್ಕೆಯನ್ನು ಆರಿಸಬೇಕು.
ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
ರೇಷನ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಪಡೆಯಬೇಕು.
OTP ನಮೂದಿಸಿದ ಬಳಿಕ ಕುಟುಂಬದ ಸದಸ್ಯರ ವಿವರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ.
e-KYC ಮಾಡಬೇಕಾದ ಕುಟುಂಬ ಸದಸ್ಯರನ್ನು ಆಯ್ಕೆ ಮಾಡಬೇಕು.
ನಂತರ Face Authentication ಸೌಲಭ್ಯದ ಮೂಲಕ ಮುಖ ಪರಿಶೀಲನೆ ಪೂರ್ಣಗೊಳಿಸಬೇಕು.
ಪ್ರಕ್ರಿಯೆ ಯಶಸ್ವಿಯಾದ ಬಳಿಕ e-KYC ಯಶಸ್ವಿಯಾಗಿದೆ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
ಹಿರಿಯ ನಾಗರಿಕರು ಹಾಗೂ ಮಕ್ಕಳಿಗೂ ಅನುಕೂಲವಾಗುವಂತೆ Face Authentication ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲದೆ ಮನೆಯಲ್ಲೇ e-KYC ಮಾಡಿಕೊಳ್ಳಬಹುದಾಗಿದೆ.
ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ‘ಅನ್ನಸೇವೆ’ ಆ್ಯಪ್ ಮೂಲಕ e-KYC ಮಾಡಿಕೊಳ್ಳುವ ವಿಧಾನವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಗ್ರಾಹಕರ e-KYC ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ವೇಗ ಹಾಗೂ ತೊಂದರೆರಹಿತಗೊಳಿಸುವ ಉದ್ದೇಶದಿಂದ ಈ ಡಿಜಿಟಲ್ ಸೇವೆಯನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.







Comments