ಪುತ್ತೂರು: ದಾಂಪತ್ಯ ಕಲಹಕ್ಕೆ ಬಲಿಯಾದ ಪತ್ನಿ; ಪತಿಯೂ ಆತ್ಮಹತ್ಯೆಗೆ ಯತ್ನ

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿ ದಾಂಪತ್ಯ ಕಲಹವೊಂದು ಕೊಲೆಯಲ್ಲಿ ಅಂತ್ಯವಾದ ಘೋರ ಘಟನೆ ಇಂದು ನಡೆದಿದೆ. ದಂಪತಿಗಳ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಆವೇಶಕ್ಕೊಳಗಾದ ಪತಿಯು ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪತ್ನಿಯನ್ನು ಕೊಲೆ ಮಾಡಿದ ನಂತರ ಪತಿಯೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಸ್ಥಿತಿ ಸದ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆತನನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯವಾಗಿ ಈ ಘಟನೆಯು ಭಾರೀ ಆತಂಕ ಮತ್ತು ಆಘಾತವನ್ನು ಸೃಷ್ಟಿಸಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಮಹಜರು ನಡೆಸಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.







Comments