ಪುತ್ತೂರು: ಭಾರೀ ಮಳೆಗೆ ಆನೆಮಜಲು ಕೋರ್ಟ್ ಬಳಿ ಆವರಣ ಗೋಡೆ ಧರಾಶಾಹಿ – ಸಂಚಾರಕ್ಕೆ ಅಡಚಣೆ, ಕಾಮಗಾರಿ ಗುಣಮಟ್ಟಕ್ಕೆ ಸಾರ್ವಜನಿಕರ ಆಕ್ರೋಶ

ಪುತ್ತೂರು: ನಗರದಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಆನೆಮಜಲು ನ್ಯಾಯಾಲಯದ ಬಳಿ ಇರುವ ಆವರಣ ಗೋಡೆಯೊಂದು ಕುಸಿದು ರಸ್ತೆಗೆ ಬಿದ್ದ ಘಟನೆ ಸಂಭವಿಸಿದೆ.
ಕೋರ್ಟ್ ಸಂಕೀರ್ಣದ ಬಳಿಯಿರುವ ಅಂಗನವಾಡಿ ಕಟ್ಟಡದ ಸಮೀಪದಲ್ಲಿದ್ದ ಈ ಆವರಣ ಗೋಡೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಇಷ್ಟೇ ಅಲ್ಲದೆ, ರಸ್ತೆಯ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಆವರಣ ಗೋಡೆಯೂ ಸಹ ಕುಸಿಯುವ ಹಂತದಲ್ಲಿದ್ದು, ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ.
ವಿಶೇಷವೆಂದರೆ, ಈ ನ್ಯಾಯಾಲಯದ ನೂತನ ಸಂಕೀರ್ಣವು ಕಳೆದ ಜನವರಿಯಷ್ಟೇ ಉದ್ಘಾಟನೆಗೊಂಡಿತ್ತು. ಮೊದಲ ಮಳೆಗಾಲ ಪೂರ್ಣಗೊಳ್ಳುವ ಮುನ್ನವೇ ಈ ರೀತಿ ಗೋಡೆ ಕುಸಿದಿರುವುದು ಕಾಮಗಾರಿಯ ಕಳಪೆ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ತೀವ್ರತೆಯನ್ನು ಅರಿತು ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಬೇಕು. ಹಾಗೆಯೇ ಬಿದ್ದ ಗೋಡೆಯನ್ನು ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.







Comments