ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರಕ್ಕೆ ಕಡಿವಾಣ; ಏಕರೂಪ ದರ ನಿಗದಿಗೆ ಚರ್ಚೆ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ರೀತಿಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಚಿಕಿತ್ಸಾ ವೆಚ್ಚದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಚಿಕಿತ್ಸಾ ದರಗಳಿಗೆ ನಿಯಂತ್ರಣ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಒಂದೇ ರೀತಿಯ ಚಿಕಿತ್ಸೆಗೆ ವಿವಿಧ ಆಸ್ಪತ್ರೆಗಳು ವಿಭಿನ್ನ ಮೊತ್ತ ವಸೂಲಿ ಮಾಡುತ್ತಿರುವುದರಿಂದ ರೋಗಿಗಳು ಮತ್ತು ಕುಟುಂಬಸ್ಥರು ಗೊಂದಲಕ್ಕೊಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮುಖ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಏಕರೂಪದ ದರ ನಿಗದಿಪಡಿಸುವ ಸಾಧ್ಯತೆ ಕುರಿತು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹಾಗೂ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಆಸ್ಪತ್ರೆಗಳಲ್ಲಿ ದರಪಟ್ಟಿ ಕಡ್ಡಾಯ?
ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಚಿಕಿತ್ಸೆಯ ಅಂದಾಜು ವೆಚ್ಚದ ಬಗ್ಗೆ ಮಾಹಿತಿ ಪಡೆಯುವಂತಾಗಲು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶಿಸುವ ವ್ಯವಸ್ಥೆಗೆ ಇಲಾಖೆ ಒತ್ತು ನೀಡಿದೆ.
ಆಸ್ಪತ್ರೆಗಳಲ್ಲಿ ಸುಮಾರು 4,000ಕ್ಕೂ ಹೆಚ್ಚು ಬಗೆಯ ಚಿಕಿತ್ಸೆಗಳು ಇರುವುದರಿಂದ ಎಲ್ಲ ದರಗಳನ್ನು ಒಂದೇ ಫಲಕದಲ್ಲಿ ಪ್ರದರ್ಶಿಸುವುದು ಕಷ್ಟ. ಹೀಗಾಗಿ ಪ್ರಮುಖ ಚಿಕಿತ್ಸೆಗಳ ದರಗಳನ್ನು ಆಸ್ಪತ್ರೆಯಲ್ಲಿನ ಸೂಕ್ತ ಸ್ಥಳದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸುವಂತೆ ಸೂಚಿಸಲಾಗುತ್ತಿದೆ. ಉಳಿದ ಚಿಕಿತ್ಸೆಗಳ ಸಂಪೂರ್ಣ ದರಪಟ್ಟಿಯನ್ನು ಪುಸ್ತಕ ಅಥವಾ ದಾಖಲೆ ರೂಪದಲ್ಲಿ ರಿಸೆಪ್ಷನ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಇರಿಸುವ ಪ್ರಸ್ತಾವನೆ ಇದೆ.
ಆರು ತಿಂಗಳ ಕಾಲಾವಕಾಶ ಕೇಳಿದ ಆಸ್ಪತ್ರೆಗಳು
ದರಪಟ್ಟಿ ಪ್ರದರ್ಶನ ಹಾಗೂ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದ ಹೊಸ ವ್ಯವಸ್ಥೆ ಜಾರಿಗೆ ತರಲು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹೆಚ್ಚಿನ ಸಮಯ ಕೋರಿದ್ದಾರೆ. ಆಸ್ಪತ್ರೆಗಳ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಅಗತ್ಯ ಬದಲಾವಣೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಪೂರ್ಣಗೊಳಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಗಳ ಮನವಿಯನ್ನು ಪರಿಶೀಲಿಸಿದ ಬಳಿಕ ಎಷ್ಟು ಕಾಲಾವಕಾಶ ನೀಡಬೇಕು ಎಂಬುದನ್ನು ಇಲಾಖೆ ನಿರ್ಧರಿಸಲಿದೆ.
ಚಿಕಿತ್ಸಾ ವೆಚ್ಚ ಹೆಚ್ಚಳದ ಬಗ್ಗೆಯೂ ಕಳವಳ
ಆಸ್ಪತ್ರೆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿರುವ ಕೆಲವು ವಿದೇಶಿ ಕಂಪನಿಗಳು ಹೆಚ್ಚಿನ ಲಾಭಕ್ಕೆ ಆದ್ಯತೆ ನೀಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ವೈದ್ಯರಿಗೆ ನಿರ್ದಿಷ್ಟ ಗುರಿಗಳನ್ನು ನೀಡುವ ಮೂಲಕ ಚಿಕಿತ್ಸಾ ವೆಚ್ಚವನ್ನು ಅನಗತ್ಯವಾಗಿ ಹೆಚ್ಚಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಚಿಕಿತ್ಸೆಯ ವೆಚ್ಚದ ಬಗ್ಗೆ ರೋಗಿಗಳಿಗೆ ಮೊದಲೇ ಸ್ಪಷ್ಟ ಮಾಹಿತಿ ದೊರೆತರೆ, ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಆಸ್ಪತ್ರೆ ಹಾಗೂ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ.
ಸದ್ಯ ಏಕರೂಪದ ಚಿಕಿತ್ಸಾ ದರದ ಪ್ರಸ್ತಾವನೆ ಆರೋಗ್ಯ ಇಲಾಖೆಯ ಪರಿಶೀಲನೆಯಲ್ಲಿದೆ. ಯಾವ ಚಿಕಿತ್ಸೆಗಳು ಏಕರೂಪದ ದರದ ವ್ಯಾಪ್ತಿಗೆ ಬರಲಿವೆ, ಆಸ್ಪತ್ರೆಗಳ ಮೂಲಸೌಕರ್ಯ ಮತ್ತು ಚಿಕಿತ್ಸಾ ವೆಚ್ಚದಲ್ಲಿನ ವ್ಯತ್ಯಾಸವನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬುದರ ಕುರಿತು ಮುಂದಿನ ಚರ್ಚೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.







Comments