ಪೆರುವಾಜೆ: ಕೌಟುಂಬಿಕ ಕಲಹ - ಪತ್ನಿ, ಅತ್ತೆಯ ಮೇಲೆ ಹಲ್ಲೆ ನಡೆಸಿ, ವಿಷ ಸೇವಿಸಿದ ಪತಿ!

ಪೆರುವಾಜೆ (ದಕ್ಷಿಣ ಕನ್ನಡ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯ ಮೇಲೆ ಹರಿತವಾದ ಸಾಧನದಿಂದ ಭೀಕರ ಹಲ್ಲೆ ನಡೆಸಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಅನವುಗುಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮುಕ್ಕೂರು ನಿವಾಸಿ ಗಣೇಶ್ (38) ಹಲ್ಲೆ ನಡೆಸಿದ ಆರೋಪಿ. ಈತನ ಪತ್ನಿ ವಿನಿತಾ (32) ಮತ್ತು ಆಕೆಯ ತಾಯಿ ಕುಸುಮಾ (50) ಗಂಭೀರ ಗಾಯಗೊಂಡ ಸಂತ್ರಸ್ತರು.
ಪೊಲೀಸರು ನೀಡಿದ ಮಾಹಿತಿಯಂತೆ, ಶನಿವಾರ ಮಧ್ಯಾಹ್ನ ಅನವುಗುಡಿಯಲ್ಲಿರುವ ಮನೆಯಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಣೇಶ್ ಮತ್ತು ಪತ್ನಿಯ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತು ಬೆಳೆದು ಕೋಪೋದ್ರಿಕ್ತನಾದ ಗಣೇಶ್, ಪತ್ನಿ ವಿನಿತಾ ಹಾಗೂ ಆಕೆಯ ತಾಯಿ ಕುಸುಮಾ ಅವರ ಮೇಲೆ ಹರಿತವಾದ ಸಾಧನದಿಂದ ಮನಬಂದಂತೆ ದಾಳಿ ನಡೆಸಿದ್ದಾನೆ. ದಾಳಿಯಿಂದ ಇಬ್ಬರ ದೇಹಕ್ಕೂ ತೀವ್ರ ರಕ್ತಗಾಯಗಳಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ದಾಳಿಯ ಬಳಿಕ ತೀವ್ರ ಭಯ ಹಾಗೂ ಪಶ್ಚಾತ್ತಾಪಕ್ಕೊಳಗಾದ ಆರೋಪಿ ಗಣೇಶ್, ತಾನೂ ಇಲಿಪಾಷಾಣ (ವಿಷ) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನೂ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಪ್ರಸ್ತುತ ವಿನಿತಾ ಮತ್ತು ಕುಸುಮಾ ಅವರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಿಷ ಸೇವಿಸಿರುವ ಗಣೇಶ್‌ಗೂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಕೈಗೊಂಡಿದ್ದಾರೆ.







Comments