15ಕ್ಕೂ ಹೆಚ್ಚು ದೂರು, ಲೋಕಾಯುಕ್ತ ದಾಳಿ ಬೆನ್ನಲ್ಲೇ ಕ್ರಮ: ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ಸಸ್ಪೆಂಡ್!

ಮಂಗಳೂರು, ಸೆ.23: ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಲಂಚದ ಬೇಡಿಕೆ ಹಾಗೂ ಅನುಚಿತ ವರ್ತನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಆರ್ಯಾಪು ಗ್ರಾಮ ಪಂಚಾಯಿತಿಯ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಅಮಾನತುಗೊಳಿಸಿದ್ದಾರೆ.
ವಾರದ ಹಿಂದಷ್ಟೇ ಅವರನ್ನು ಉಪ್ಪಿನಂಗಡಿ ಗ್ರಾಮಾಂತರ ಪಂಚಾಯಿತಿಗೆ ಪಿಡಿಒ ಆಗಿ ವರ್ಗಾವಣೆ ಮಾಡಲಾಗಿತ್ತು. ಅದಕ್ಕೂ ಮುನ್ನ ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ವಿರುದ್ಧ 15ಕ್ಕೂ ಹೆಚ್ಚು ಸಾರ್ವಜನಿಕ ದೂರುಗಳು ದಾಖಲಾಗಿದ್ದವು ಎನ್ನಲಾಗಿದೆ.
ವ್ಯಾಪಾರ ಪರವಾನಗಿ ನವೀಕರಣದಲ್ಲಿ ವಿಳಂಬ, ದಾಖಲೆ ಹಾಗೂ ವೈಯಕ್ತಿಕ ಕೆಲಸಗಳಿಗೆ ಹಣದ ಬೇಡಿಕೆ, ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲು ವಿಳಂಬ, ಕಾಮಗಾರಿಗಳ ನಿರ್ವಹಣೆ ಹಾಗೂ ಕಚೇರಿ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ದೂರುಗಳು ಕೇಳಿಬಂದಿದ್ದವು.
ಸೆಪ್ಟೆಂಬರ್ 9ರಂದು ಲೋಕಾಯುಕ್ತ ಅಧಿಕಾರಿಗಳು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ದೂರುಗಳ ಕುರಿತು ಇಲಾಖಾ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಗಳು ಸಾಬೀತಾಗಿವೆ ಎಂದು ಪರಿಗಣಿಸಲಾಗುವುದಿಲ್ಲ.







Comments