ಪಶ್ಚಿಮ ಬಂಗಾಳದಲ್ಲಿ ಜಾನುವಾರು ವಧೆ ನಿಯಂತ್ರಣ ಕಾಯ್ದೆ ಜಾರಿ: ಗ್ರಾಮೀಣ ಆರ್ಥಿಕತೆಗೆ ಪೆಟ್ಟು

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ಜಾನುವಾರುಗಳ ವಧೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1950 ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಹಬ್ಬಗಳ ಸಂದರ್ಭದಲ್ಲಿ ಜಾನುವಾರು ವಧೆ ನಿರ್ಬಂಧಿಸುವ ಸರ್ಕಾರದ ಈ ಸಾರ್ವಜನಿಕ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.
ಹೊಸ ನಿಯಮದ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅಷ್ಟೇ ಅಲ್ಲದೆ, ಎತ್ತು, ಹಸು ಹಾಗೂ ಎಮ್ಮೆಗಳನ್ನು ವಧೆ ಮಾಡಬೇಕಾದರೆ ಅವು ವಧೆಗೆ ಯೋಗ್ಯವಾಗಿವೆ ಎಂದು ಪಶುವೈದ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ. ಇವುಗಳನ್ನು ಕೇವಲ ಸರ್ಕಾರ ಅನುಮೋದಿಸಿದ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶವಿದೆ.
ಆದರೆ, ಈ ನಿಯಮವು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಹಿಂದೂ ರೈತರು ಮತ್ತು ಹೈನುಗಾರರ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ವಯಸ್ಸಾದ ಜಾನುವಾರುಗಳನ್ನು ಸಾಕುವುದು ಹೊರೆಯಾಗುತ್ತಿರುವುದರಿಂದ ಮತ್ತು ಹಬ್ಬದ ಸನಿಹದಲ್ಲಿ ಮಾರುಕಟ್ಟೆಗಳು ಕಳೆಗುಂದಿರುವುದರಿಂದ, ವ್ಯಾಪಾರ ನಂಬಿಕೊಂಡಿರುವ ಸ್ಥಳೀಯ ರೈತರು ಹಾಗೂ ಮಾಂಸೋದ್ಯಮದ ವ್ಯಾಪಾರಿ ವಲಯದಿಂದ ಈ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.







Comments