;
top of page

ಪ್ಯಾನ್ ನಿಯಮಗಳಲ್ಲಿ ಬದಲಾವಣೆ: 2026ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ

  • 1 day ago
  • 1 min read

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಆದಾಯ ತೆರಿಗೆ ಕಾಯ್ದೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಪ್ಯಾನ್ ಬಳಕೆ ಸಂಬಂಧಿತ ಹಲವು ಮಹತ್ವದ ಬದಲಾವಣೆಗಳನ್ನು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಇವು ಸಾರ್ವಜನಿಕ ಪರಾಮರ್ಶೆಗೆ ಒಳಪಟ್ಟಿದ್ದು, ಅಂತಿಮ ನಿಯಮಗಳು ಪ್ರಕಟವಾದ ಬಳಿಕ ಜಾರಿಗೆ ಬರಲಿವೆ.

ಹೊಸ ನಿಯಮಗಳು ಸಾಮಾನ್ಯ ನಾಗರಿಕರ ಹಣಕಾಸು ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಕ್ಯಾಷ್ ಡೆಪಾಸಿಟ್, ವಾಹನ ಖರೀದಿ, ಹೋಟೆಲ್ ಪಾವತಿ, ರಿಯಲ್ ಎಸ್ಟೇಟ್ ಹಾಗೂ ಇನ್ಷೂರೆನ್ಸ್ ಕ್ಷೇತ್ರಗಳಲ್ಲಿ ಪ್ಯಾನ್ ಕಡ್ಡಾಯತೆಗೆ ಸಂಬಂಧಿಸಿದ ಮಿತಿಗಳನ್ನು ಪರಿಷ್ಕರಿಸಲಾಗಿದೆ.

ಕ್ಯಾಷ್ ಡೆಪಾಸಿಟ್ ಮತ್ತು ವಿತ್‌ಡ್ರಾಯಲ್ ಮಿತಿ ಏರಿಕೆ

ಪ್ರಸ್ತಾಪಿತ ನಿಯಮದಂತೆ, ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ ಒಟ್ಟು 10 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ಠೇವಣಿ ಅಥವಾ ನಗದು ಹಿಂಪಡೆಯುವಿಕೆ ಮಾಡಿದರೆ ಪ್ಯಾನ್ ನಮೂದಿಸಬೇಕಾಗುತ್ತದೆ. ಪ್ರಸ್ತುತ ನಿಯಮದಲ್ಲಿ ದಿನಕ್ಕೆ 50,000 ರೂ.ಗಿಂತ ಹೆಚ್ಚಿನ ನಗದು ಠೇವಣಿಗೆ ಪ್ಯಾನ್ ನೀಡುವುದು ಕಡ್ಡಾಯವಾಗಿದೆ. ಹೊಸ ನಿಯಮ ಜಾರಿಯಾದರೆ ಸಣ್ಣ ಮೊತ್ತದ ವ್ಯವಹಾರಗಳಿಗೆ ಸಡಿಲಿಕೆ ಸಿಗಲಿದೆ.

ವಾಹನ ಖರೀದಿಯಲ್ಲಿ ಹೊಸ ಮಿತಿ

ಈಗಿರುವ ನಿಯಮದ ಪ್ರಕಾರ ಯಾವುದೇ ಮೌಲ್ಯದ ವಾಹನ ಖರೀದಿಸಿದರೂ ಪ್ಯಾನ್ ತೋರಿಸುವುದು ಕಡ್ಡಾಯ. ಆದರೆ ಹೊಸ ಕರಡು ಪ್ರಕಾರ 5 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನ ಖರೀದಿಸಿದಾಗ ಮಾತ್ರ ಪ್ಯಾನ್ ನೀಡಬೇಕಾಗುತ್ತದೆ ಎಂದು ಸೂಚಿಸಲಾಗಿದೆ

ಹೋಟೆಲ್ ಮತ್ತು ಈವೆಂಟ್ ಪಾವತಿಗಳು

ಹೋಟೆಲ್, ರೆಸ್ಟೋರೆಂಟ್, ಬ್ಯಾಂಕ್ವೆಟ್ ಹಾಲ್, ಕನ್ವೆನ್ಷನ್ ಸೆಂಟರ್ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಸೇವೆಗಳಿಗೆ ಪಾವತಿಸುವ ಮೊತ್ತ 50,000 ರೂ. ಮೀರಿದರೆ ಪ್ಯಾನ್ ನೀಡಬೇಕೆಂಬ ನಿಯಮವಿದೆ. ಇದನ್ನು 1 ಲಕ್ಷ ರೂ.ಗೆ ಏರಿಸುವ ಪ್ರಸ್ತಾಪ ಹೊಸ ಕರಡು ನಿಯಮಗಳಲ್ಲಿ ಇದೆ.

ರಿಯಲ್ ಎಸ್ಟೇಟ್ ವ್ಯವಹಾರ

ಪ್ರಸ್ತುತ 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಜಮೀನು ಅಥವಾ ಮನೆ ಖರೀದಿ/ಮಾರಾಟ ವ್ಯವಹಾರಗಳಲ್ಲಿ ಪ್ಯಾನ್ ಕಡ್ಡಾಯವಾಗಿದೆ. ಹೊಸ ನಿಯಮದಲ್ಲಿ ಈ ಮಿತಿಯನ್ನು 20 ಲಕ್ಷ ರೂ.ಗೆ ಏರಿಸಲು ಸರ್ಕಾರ ಯೋಚಿಸಿದೆ.

ಇನ್ಷೂರೆನ್ಸ್ ಪಾಲಿಸಿಗೆ ಪ್ಯಾನ್ ಕಡ್ಡಾಯ

ಈಗ ಲೈಫ್ ಇನ್ಷೂರೆನ್ಸ್ ಪ್ರೀಮಿಯಂ ವರ್ಷಕ್ಕೆ 50,000 ರೂ. ಮೀರಿದರೆ ಮಾತ್ರ ಪ್ಯಾನ್ ಅಗತ್ಯ. ಆದರೆ ಹೊಸ ನಿಯಮದಂತೆ ಪಾಲಿಸಿ ತೆಗೆದುಕೊಳ್ಳುವಾಗಲೇ ಪ್ಯಾನ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ.

ಇತರೆ ಪ್ರಮುಖ ಪ್ರಸ್ತಾಪಗಳು

ಹೊಸ ಕರಡು ನಿಯಮಗಳಲ್ಲಿ ಕ್ರಿಪ್ಟೋ ವಹಿವಾಟುಗಳ ಮಾಹಿತಿಯನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ನೀಡುವುದು ಕಡ್ಡಾಯ ಮಾಡುವುದರ ಜೊತೆಗೆ, ಸಿಬಿಡಿಸಿ (ಇ-ರುಪಾಯಿ) ಅನ್ನು ಅಧಿಕೃತ ಎಲೆಕ್ಟ್ರಾನಿಕ್ ಪಾವತಿ ವಿಧಾನವಾಗಿ ಪರಿಗಣಿಸುವುದನ್ನೂ ಒಳಗೊಂಡಿದೆ.

ಒಟ್ಟಾರೆ, ಹೊಸ ಆದಾಯ ತೆರಿಗೆ ಕಾಯ್ದೆ 2026 ಹಣಕಾಸು ವ್ಯವಹಾರಗಳನ್ನು ಸರಳಗೊಳಿಸುವ ಉದ್ದೇಶ ಹೊಂದಿದ್ದರೂ, ಪ್ಯಾನ್ ಬಳಕೆಯಲ್ಲಿ ಸ್ಪಷ್ಟತೆ ಹಾಗೂ ನಿಯಂತ್ರಣವನ್ನು ಹೆಚ್ಚಿಸುವ ದಿಸೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆ ಅಂತಿಮ ನಿಯಮಗಳು ರೂಪುಗೊಳ್ಳಲಿವೆ

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page