ನೀಟ್ ಮರು ಪರೀಕ್ಷೆ ಹಿನ್ನೆಲೆ: ದೇಶದಲ್ಲಿ ಟೆಲಿಗ್ರಾಮ್ ಸೇವೆ ತಾತ್ಕಾಲಿಕ ಸ್ಥಗಿತ?

ನೀಟ್-ಯುಜಿ 2026 ಮರು ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಸುಳ್ಳು ವದಂತಿ ಹಾಗೂ ಆನ್‌ಲೈನ್ ವಂಚನೆಗಳನ್ನು ತಡೆಗಟ್ಟಲು ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ಆದ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿರ್ದೇಶನದಂತೆ ಜೂನ್ 21ರ ಪರೀಕ್ಷೆ ಹಿನ್ನೆಲೆಯಲ್ಲಿ ಜೂನ್ 22ರವರೆಗೆ ಈ ನಿರ್ಬಂಧ ಇರಲಿದೆ. ಮುಖ್ಯವಾಗಿ ಟೆಲಿಗ್ರಾಮ್‌ನ 'ಮೆಸೇಜ್ ಎಡಿಟಿಂಗ್' ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಂಡು, ಪರೀಕ್ಷೆಯ ನಂತರ ಹಳೆಯ ಸಂದೇಶಗಳನ್ನು ತಿದ್ದಿ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆ ಸಿಕ್ಕಿತ್ತು ಎಂಬ ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಕೆಲವು ವಂಚಕರು ಚಾನೆಲ್‌ಗಳ ಮೂಲಕ ಪೋಷಕರು ಮತ್ತು ಅಭ್ಯರ್ಥಿಗಳನ್ನು ನಂಬಿಸಿ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದರು. ಭಾರತದಲ್ಲಿ 10 ಕೋಟಿಗೂ ಹೆಚ್ಚು ಬಳಕೆದಾರರಿದ್ದು, ಈ ತಾತ್ಕಾಲಿಕ ನಿರ್ಬಂಧದಿಂದ ಸಾಮಾನ್ಯ ಜನರಿಗೆ ತುಸು ಅಸೌಕರ್ಯವಾದರೂ ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







Comments