ಫೆಬ್ರವರಿ 12 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಫೆಬ್ರವರಿ 12 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮುಷ್ಕರದಲ್ಲಿ ಭಾಗವಹಿಸಲಿದ್ದು, ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬ್ಯಾಂಕ್‌ಗಳು ಗ್ರಾಹಕರಿಗೆ ಮುಂಚಿತ ಎಚ್ಚರಿಕೆ ನೀಡಿದ್ದಾರೆ.
ಮುಷ್ಕರದ ಹಿನ್ನೆಲೆ ಯಾವುದೇ ತುರ್ತು ಬ್ಯಾಂಕಿಂಗ್ ವ್ಯವಹಾರಗಳನ್ನು ಫೆ.12 ಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಸೂಚಿಸಿವೆ. ಶಾಖೆಗಳು ತೆರೆದಿರಬಹುದಾದರೂ, ನಗದು ವಹಿವಾಟು, ಚೆಕ್ ಕ್ಲಿಯರಿಂಗ್ ಸೇರಿದಂತೆ ಕೌಂಟರ್ ಸೇವೆಗಳಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಆದರೆ ಡಿಜಿಟಲ್ ಬ್ಯಾಂಕಿಂಗ್, ಯುಪಿಐ, ಎಟಿಎಂ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುವ ಸಾಧ್ಯತೆ ಹೆಚ್ಚಾಗಿದೆ.
ಹಿಂದೂ ಮಜ್ದೂರ್ ಕಿಸಾನ್ ಪಂಚಾಯತ್‌ನ ಪ್ರಾಂತೀಯ ನಾಯಕ ಮೊಹಮ್ಮದ್ ಹಸ್ನೈನ್ ಅನ್ಸಾರಿ ಹಾಗೂ ಉತ್ತರ ಪ್ರದೇಶ ಕಿಸಾನ್ ಸಂಘಟನೆಯ ಇಂದ್ರದೇವ್ ಪಾಲ್ ಅವರು ಫೆ.12ರಂದು ಜಿಲ್ಲೆ ಹಾಗೂ ದೇಶದಾದ್ಯಂತ ವ್ಯಾಪಕ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಬ್ಯಾಂಕ್‌ಗಳು, ಭಾರತೀಯ ಜೀವ ವಿಮಾ ನಿಗಮ (LIC) ಮತ್ತು ಅಂಚೆ ಕಚೇರಿಗಳು ಕೂಡ ಮುಚ್ಚಲ್ಪಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬ್ಯಾಂಕ್ ಹಾಗೂ ಎಲ್‌ಐಸಿ ಉದ್ಯೋಗಿಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಜನವರಿ 27ರಂದು ಬ್ಯಾಂಕ್ ಉದ್ಯೋಗಿಗಳು ಒಂದು ದಿನದ ಮುಷ್ಕರ ನಡೆಸಿದ್ದರು. ಇನ್ನು ಕಳೆದ ವರ್ಷ ಸರ್ಕಾರ ಹೊರಡಿಸಿದ ಅಧಿಸೂಚನೆಯ ಮೂಲಕ ಜಾರಿಗೊಂಡ ನಾಲ್ಕು ಹೊಸ ಕಾರ್ಮಿಕ ಕಾನೂನುಗಳನ್ನು ವಿರೋಧಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ.
ಮುಷ್ಕರದಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ವ್ಯವಹಾರಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವುದು ಒಳಿತು.







Comments