ಮುಂಬೈನಲ್ಲಿ ಗಣೇಶ ಮೂರ್ತಿ ಕುಸಿದು ದುರಂತ: ಇಬ್ಬರು ಸಾವು, ಐವರಿಗೆ ಗಾಯ

ಮುಂಬೈನ ಭುಲೇಶ್ವರ ಪ್ರದೇಶದ ಜೈ ಅಂಬೆ ಚೌಕ್‌ನಲ್ಲಿ ಶನಿವಾರ ರಾತ್ರಿ 'ಭುಲೇಶ್ವರಚ ರಾಜ' ಗಣೇಶ ಮೂರ್ತಿಯ ಆಗಮನ ಮೆರವಣಿಗೆಯ ವೇಳೆ 22 ಅಡಿ ಎತ್ತರದ ಬೃಹತ್ ವಿಗ್ರಹ ಏಕಾಏಕಿ ಕುಸಿದು ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಮೆರವಣಿಗೆ ವಾಹನದಲ್ಲಿ ವಿಗ್ರಹವನ್ನು ಭದ್ರಪಡಿಸಿದ್ದ ಬೋಲ್ಟ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿದ್ದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತಿಳಿಸಿದೆ.

ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಕೇತ್ ನೆವ್ಶೆ (33) ಮತ್ತು ಬ್ರಿಜೇಶ್ ಹೇಮಂತ್ ಜೋಶಿ (30) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಗೊಂಡ ಐವರಲ್ಲಿ 5 ಮತ್ತು 7 ವರ್ಷದ ಇಬ್ಬರು ಸಣ್ಣ ಬಾಲಕಿಯರೂ ಸೇರಿದ್ದು, ಅವರಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಈ ಘಟನೆಯಿಂದಾಗಿ ಗಣೇಶೋತ್ಸವದ ಬೃಹತ್ ಮೂರ್ತಿಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ. 20 ಅಡಿಗಿಂತ ಎತ್ತರದ ವಿಗ್ರಹಗಳನ್ನು ಸಾಗಿಸುವಾಗ ವಾಹನಗಳ ಫಿಟ್ಟಿಂಗ್‌ಗಳು ಮತ್ತು ಸಾಮರ್ಥ್ಯವನ್ನು ನುರಿತ ತಜ್ಞರಿಂದ ಕಡ್ಡಾಯವಾಗಿ ಪರಿಶೀಲಿಸಿ ಪ್ರಮಾಣೀಕರಿಸಿಕೊಳ್ಳಬೇಕು ಎಂದು ಆಯೋಜಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.







Comments