ಮೂಡುಬಿದಿರೆಯಲ್ಲಿ ದುರಂತ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಪ್ರವಹಿಸಿ ತಾಯಿ–ಮಗ ಸಾವು!

ಮೂಡುಬಿದಿರೆ: ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ತಾಯಿ–ಮಗ ಇಬ್ಬರೂ ವಿದ್ಯುತ್ ಶಾಕ್‌ಗೆ ಬಲಿಯಾದ ದಾರುಣ ಘಟನೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ ಶೋನ್ ಮಸ್ಕರೇನಸ್ (18) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಬಟ್ಟೆ ಒಣಗಿಸುತ್ತಿದ್ದ ವೇಳೆ ಶೋನ್‌ಗೆ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ. ಮಗನನ್ನು ರಕ್ಷಿಸಲು ಮುಂದಾದ ತಾಯಿ ಮರ್ಸಿ ಅವರಿಗೂ ವಿದ್ಯುತ್ ಪ್ರವಹಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಹೈಟೆನ್ಶನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಘಟನೆ ಗಮನಿಸಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.
ಶೋನ್ ಮಸ್ಕರೇನಸ್ ಮೂಡುಬಿದಿರೆಯ ಹೋಲಿ ರೋಸರಿ ವಿದ್ಯಾರ್ಥಿಯಾಗಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ವಿದ್ಯುತ್ ಪ್ರವಹಿಸಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.







Comments