;
top of page

ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಶಿರೂರು ಬಳಿ ಮೂವರು ಶೂಟರ್‌ಗಳು ಅರೆಸ್ಟ್

Aug 8
2 min read

ಹಣಕಾಸಿನ ವಿಚಾರಕ್ಕೆ ಉತ್ತರ ಭಾರತದ ಶೂಟರ್‌ಗಳಿಗೆ ಸುಪಾರಿ; ಮೂವರು ಆರೋಪಿಗಳ ಬಂಧನ — ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡು

ಉಡುಪಿ, ಆ. 8: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಲು ಉತ್ತರ ಭಾರತದ ಸುಪಾರಿ ಕಿಲ್ಲರ್‌ಗಳಿಗೆ ಗುತ್ತಿಗೆ ನೀಡಲಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಉತ್ತರ ಪ್ರದೇಶ ಮೂಲದ ರಾಜು ಎಂಬಾತ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳ ಗುರುತು ಹಾಗೂ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.


ಹಾಡಹಗಲೇ ನಡೆದಿತ್ತು ಶೂಟೌಟ್


ಶುಕ್ರವಾರ ಮುದರಂಗಡಿ ಪೇಟೆಯಲ್ಲಿ ಡೇವಿಡ್ ಡಿಸೋಜಾ ಅವರ ಕಚೇರಿ ಬಳಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹತ್ಯೆಯ ಹಿಂದೆ ಇರುವ ಜಾಲದ ಸುಳಿವು ಪತ್ತೆಹಚ್ಚಿದ್ದಾರೆ.


ತನಿಖೆಯ ಪ್ರಕಾರ, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರ ಮೂಲದ ಶೂಟರ್‌ಗಳ ತಂಡ ಮುದರಂಗಡಿಗೆ ಆಗಮಿಸಿ ಡೇವಿಡ್ ಡಿಸೋಜಾ ಅವರ ಮೇಲೆ ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.


ಶಿರೂರು ಸಮೀಪ ಮೂವರ ಬಂಧನ


ಹತ್ಯೆ ನಡೆದ ಬೆನ್ನಲ್ಲೇ ಉಡುಪಿ ಪೊಲೀಸರು ಆರೋಪಿಗಳಿಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಶಿರೂರು ಸಮೀಪ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತರಲ್ಲಿ ಕೆಲವರು ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎನ್ನಲಾಗಿದ್ದು, ಅವರ ಸಂಪೂರ್ಣ ಹಿನ್ನೆಲೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪೊಲೀಸರ ಮೇಲೆ ದಾಳಿ; ಆರೋಪಿಗೆ ಗುಂಡೇಟು


ಪ್ರಕರಣದ ಪ್ರಮುಖ ಆರೋಪಿ ರಾಜುವನ್ನು ಪೊಲೀಸರು ಬಂಧಿಸಿ ಕರೆತರುತ್ತಿದ್ದ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಕಾಪು ಪೊಲೀಸ್ ಠಾಣೆಯ ಎಸ್‌ಐ ತೇಜಸ್ವಿ ಅವರು ತಮ್ಮ ಸರ್ವೀಸ್ ಪಿಸ್ತೂಲ್‌ನಿಂದ ರಾಜುವಿನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.


ಗುಂಡೇಟಿನಿಂದ ಗಾಯಗೊಂಡ ರಾಜುವನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಎಸ್‌ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಎಸ್‌ಐ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ್ದಾರೆ.


ಮಾಸ್ಟರ್‌ಮೈಂಡ್‌ಗಳಿಗಾಗಿ ತನಿಖೆ


ಡೇವಿಡ್ ಡಿಸೋಜಾ ಹತ್ಯೆಯ ಹಿಂದೆ ಹಣಕಾಸಿನ ವ್ಯವಹಾರವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹತ್ಯೆಗೆ ಸುಪಾರಿ ನೀಡಿದವರು ಯಾರು, ಎಷ್ಟು ಮೊತ್ತದ ಡೀಲ್ ನಡೆದಿತ್ತು ಹಾಗೂ ಪ್ರಕರಣದ ಹಿಂದೆ ಇನ್ನೂ ಯಾರಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಹಾಡಹಗಲೇ ನಡೆದ ಶೂಟೌಟ್ ಪ್ರಕರಣದಲ್ಲಿ ಉತ್ತರ ಭಾರತದ ಶೂಟರ್‌ಗಳ ಬಂಧನವಾಗಿರುವುದು ತನಿಖೆಯ ಪ್ರಮುಖ ಬೆಳವಣಿಗೆಯಾಗಿದೆ. ಇದೀಗ ಹತ್ಯೆಯ ಹಿಂದೆ ಇರುವ ಮಾಸ್ಟರ್‌ಮೈಂಡ್‌ಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page