ಮಂಗಳೂರು: ತಾಯಿ-ಮಗುವಿನ ಪ್ರಾಣ ಉಳಿಸಿದ ಸಿಟಿ ಬಸ್ ಸಿಬ್ಬಂದಿ; ಸಾರ್ವಜನಿಕರಿಂದ ಶ್ಲಾಘನೆ

ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ತಾಯಿ ಮತ್ತು ಮಗುವನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಸಿಟಿ ಬಸ್ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ಕರಾವಳಿಯ ಸಾರ್ವಜನಿಕ ವಲಯದಲ್ಲಿ ಈ ಹೃದಯಸ್ಪರ್ಶಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ.
ನಗರದ ಮರಕಡ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ತಾಯಿ ಮತ್ತು ಮಗು ಕೆಳಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದೆ ರಸ್ತೆಯಲ್ಲೇ ಬಿದ್ದಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಇದೇ ವೇಳೆ ಕಾವೂರಿನಿಂದ ಕುಂಜತ್‌ಬೈಲ್‌ಗೆ ಚಲಿಸುತ್ತಿದ್ದ ರೂಟ್ ನಂ. 13B ರ 'ಮಾಸ್ಟರ್' ಬಸ್‌ನ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಸಹಾಯಕ್ಕೆ ಧಾವಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆ ಅರಿತ ಸಿಬ್ಬಂದಿ, ತಕ್ಷಣವೇ ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಯುವಂತೆ ವಿನಂತಿಸಿದ್ದಾರೆ. ಬಳಿಕ ಗಾಯಾಳು ತಾಯಿ-ಮಗುವನ್ನು ಅದೇ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಜನರು ವಿಡಿಯೋ ಮಾಡುವುದರಲ್ಲೇ ನಿರತರಾಗುವ ಈ ಕಾಲದಲ್ಲಿ, ಬಸ್ ಸಿಬ್ಬಂದಿಯ ಈ ಸಕಾಲಿಕ ಮಾನವೀಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.







Comments