ಮಂಗಳೂರು-ಬೆಂಗಳೂರು ರೈಲು ಸಂಚಾರ ಸಂಪೂರ್ಣ ಸ್ಥಗಿತ: ಭೂಕುಸಿತದಿಂದ ಪ್ರಯಾಣಿಕರ ಪರದಾಟ

ಘಟ್ಟ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಕಲೇಶಪುರ ಬಳಿಯ ಎಡಕುಮೇರಿ ಮತ್ತು ಸಿರಿಬಾಗಿಲು ನಡುವೆ ರೈಲು ಹಳಿಯ ಮೇಲೆ ಭಾರಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಮಂಗಳೂರು ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವು ರೈಲುಗಳನ್ನು ಆಂಶಿಕವಾಗಿ ರದ್ದುಗೊಳಿಸಲಾಗಿದೆ.

ಬೆಂಗಳೂರು, ಮುರುಡೇಶ್ವರ, ಕೋಝಿಕ್ಕೋಡ್, ವಿಜಯಪುರ ಹಾಗೂ ಕಾರವಾರ ಕಡೆಗೆ ಸಂಚರಿಸುತ್ತಿದ್ದ ರೈಲುಗಳನ್ನು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಕಬಕ ಪುತ್ತೂರು ನಿಲ್ದಾಣಗಳಲ್ಲೇ ತಡೆಯಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು, ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣದ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ.
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಿಟಾಚಿಗಳ ಮೂಲಕ ನಿರಂತರವಾಗಿ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಮತ್ತೆ ಮತ್ತೆ ಗುಡ್ಡ ಕುಸಿಯುತ್ತಿರುವುದರಿಂದ ಕಾಮಗಾರಿಗೆ ಅಡಚಣೆಯಾಗಿದೆ. ಶೀಘ್ರದಲ್ಲೇ ಮಣ್ಣು ತೆರವುಗೊಳಿಸಿ ರೈಲು ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.







Comments