ಮಂಗಳೂರು: ವೆನ್‌ಲಾಕ್ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ: 400 ಹೆಚ್ಚುವರಿ ಹಾಸಿಗೆಗಳ ಬಲ!

ಮಂಗಳೂರು: ಕರಾವಳಿ ಕರ್ನಾಟಕ ಹಾಗೂ ನೆರೆಯ ಕೇರಳದ ರೋಗಿಗಳಿಗೆ ಆಸರೆಯಾಗಿರುವ ಮಂಗಳೂರಿನ ಪ್ರಸಿದ್ಧ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆಸ್ಪತ್ರೆಗೆ ಒಟ್ಟು 400 ಹೆಚ್ಚುವರಿ ಹಾಸಿಗೆಗಳನ್ನು ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ 200 ಹಾಸಿಗೆಗಳನ್ನು ಸೇರ್ಪಡೆಗೊಳಿಸಲು ಆರೋಗ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 18ರ ಸಂಪುಟ ಸಭೆಯ ತೀರ್ಮಾನದಂತೆ ಸೆಪ್ಟೆಂಬರ್ 25ರಂದು ಈ ಆದೇಶ ನೀಡಲಾಗಿದೆ. ಮೊದಲ ಹಂತದ 200 ಹಾಸಿಗೆಗಳಲ್ಲಿ 50 ಹಾಸಿಗೆಗಳನ್ನು ಐಸಿಯು (30 ವೆಂಟಿಲೇಟರ್, 20 ಸ್ಟೆಪ್-ಡೌನ್), 10 ಹಾಸಿಗೆಗಳನ್ನು ತುರ್ತು ಚಿಕಿತ್ಸೆ ಹಾಗೂ ಉಳಿದ 140 ಹಾಸಿಗೆಗಳನ್ನು ಸಾಮಾನ್ಯ ವಾರ್ಡ್‌ಗಳಿಗೆ ಮೀಸಲಿಡಲಾಗುತ್ತದೆ. ಈ ವಿಸ್ತರಣೆಗಾಗಿ 115 ಸ್ಟಾಫ್ ನರ್ಸ್‌ಗಳು ಸೇರಿದಂತೆ ಒಟ್ಟು 195 ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ 1,088 ಹಾಸಿಗೆಗಳಿದ್ದು, ವಿವಿಧ ಕಟ್ಟಡ ಕಾಮಗಾರಿಗಳು ಹಾಗೂ ಹೊಸ ಯೋಜನೆಗಳು ಪೂರ್ಣಗೊಂಡ ಬಳಿಕ ಆಸ್ಪತ್ರೆಯ ಒಟ್ಟು ಹಾಸಿಗೆ ಸಾಮರ್ಥ್ಯ 1,532ಕ್ಕೆ ಏರಿಕೆಯಾಗಲಿದೆ. ಇದರಲ್ಲಿ ಸಿಸಿಬಿ ಬ್ಲಾಕ್‌ನ 50 ಹಾಸಿಗೆಗಳು, ನೂತನ ಓಪಿಡಿ ಕಟ್ಟಡದ 320 ಹಾಸಿಗೆಗಳು ಮತ್ತು ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಡಿ ನಿರ್ಮಾಣವಾಗುತ್ತಿರುವ 74 ಹಾಸಿಗೆಗಳು ಸೇರಿವೆ.
ದಕ್ಷಿಣ ಕನ್ನಡ, ನೆರೆಯ ಜಿಲ್ಲೆಗಳು ಮತ್ತು ಕೇರಳದಿಂದ ಆಗಮಿಸುವ ರೋಗಿಗಳಿಗೆ ಗುಣಮಟ್ಟದ ಹಾಗೂ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಸರ್ಕಾರ ಈ ಬೃಹತ್ ಮೂಲಸೌಕರ್ಯ ವಿಸ್ತರಣೆಗೆ ಮುಂದಾಗಿದೆ. ಅಗತ್ಯ ಉಪಕರಣಗಳನ್ನು ನಿಯಮಾವಳಿಗಳಂತೆ ಲಭ್ಯವಿರುವ ಬಂಡವಾಳ ಅನುದಾನದಲ್ಲೇ ಖರೀದಿಸಲು ನಿರ್ದೇಶಿಸಲಾಗಿದೆ.







Comments