ಮಂಗಳೂರಿನಲ್ಲಿ ಸಚಿವ ಸಂಪುಟ ಐತಿಹಾಸಿಕ ಸಭೆ: ಕರಾವಳಿಯ ಆತಿಥ್ಯ ಸವಿದ ಗಣ್ಯರು

ಮಂಗಳೂರು: ಕಡಲನಗರಿ ಮಂಗಳೂರಿನ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ 'ಪ್ರಜಾಸೌಧ'ದ 2ನೇ ಮಹಡಿಯಲ್ಲಿ ರಾಜ್ಯ ಸಚಿವ ಸಂಪುಟದ ಐತಿಹಾಸಿಕ ಸಭೆ ಆಯೋಜನೆಯಾಗಿದೆ. ಸಭಾಂಗಣದ ಬೃಹತ್ ವೃತ್ತಾಕಾರದ ಮೇಜನ್ನು ನೈಸರ್ಗಿಕ ಹೂವುಗಳಿಂದ ಅತ್ಯಾಕರ್ಷಕವಾಗಿ ಅಲಂಕರಿಸಲಾಗಿದ್ದು, ಮೈಕ್, ಫೋಲ್ಡರ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಂತಿಮಗೊಳಿಸಲಾಗಿದೆ. ಸಭೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ತಣ್ಣೀರುಬಾವಿ ಬೀಚ್‌ನಲ್ಲಿ ಕರಾವಳಿ ಆತಿಥ್ಯ, ಸಂಸ್ಕೃತಿಯ ಪ್ರದರ್ಶನ
ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ತಣ್ಣೀರುಬಾವಿ ಕಡಲತೀರದಲ್ಲಿ ವಿಶೇಷ ಔತಣಕೂಟ ಆಯೋಜಿಸಲಾಗಿತ್ತು. ಕರಾವಳಿಯ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಸವಿದ ಗಣ್ಯರು, ಅಲ್ಲಿ ಏರ್ಪಡಿಸಲಾಗಿದ್ದ ತುಳುನಾಡಿನ ಶ್ರೀಮಂತ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ವೀಕ್ಷಿಸಿದರು.
ದೈವಾರಾಧನೆಯ ಪ್ರಾಚೀನ ಕಂಚಿನ ಮುಖವರ್ಣಿಕೆಗಳು, ಖಡ್ಗ, ಗಂಟೆಗಳು, ಯಕ್ಷಗಾನದ ಮುಂಡಾಸು, ಕಿರೀಟ ಹಾಗೂ ಹುಲಿವೇಷದ ಮುಖವಾಡಗಳನ್ನು ಸಿಎಂ ಆಸಕ್ತಿಯಿಂದ ಗಮನಿಸಿದರು. ಪ್ರದರ್ಶನದಲ್ಲಿದ್ದ ಪ್ರಾಚೀನ ಕಹಳೆ ಊದಿದ ಸಿಎಂ, ಬಳಿಕ ಚಂಡೆ ಹಾಗೂ 'ದುಡಿ' ವಾದ್ಯಗಳನ್ನು ಸ್ವತಃ ಬಾರಿಸಿ ಸಂಭ್ರಮಿಸಿದರು. ಕೃಷಿಗೆ ನೀರೆತ್ತುವ ಸಾಧನ, ಮರದ ಸೇರು-ಪಾವು ಹಾಗೂ ಹಳೆಯ ಗ್ರಾಮಫೋನ್ ರೆಕಾರ್ಡರ್‌ಗಳನ್ನು ವೀಕ್ಷಿಸಿ ಕರಾವಳಿಯ ಸಂಸ್ಕೃತಿ ಮತ್ತು ಜೀವನಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಣ್ಣೀರುಬಾವಿಯಲ್ಲಿ ಲೈವ್ ಶಾಸ್ತ್ರೀಯ ಸಂಗೀತದ ನಡುವೆ ಕ್ಯಾಂಡಲ್‌ಲೈಟ್ ಟೇಬಲ್‌ಗಳಲ್ಲಿ ಗಣ್ಯರು ಭೋಜನ ಸವಿದರು. ಈ ವೇಳೆ ಮಾತನಾಡಿದ ಸಚಿವ ಯು.ಟಿ. ಖಾದರ್, "ಸಭೆಯ ದಿನ ಸಮಯದ ಅಭಾವವಿರುವುದರಿಂದ ಹಿಂದಿನ ದಿನವೇ ಕರಾವಳಿಯ ವಿಶೇಷ ಖಾದ್ಯಗಳ ಔತಣಕೂಟ ಏರ್ಪಡಿಸಲಾಗಿದೆ" ಎಂದರು.
ಸಿಎಂ ಜೊತೆ ಕಸ್ತೂರಿ ರಂಗನ್ ವರದಿ, ಜಂಟಿ ಸರ್ವೆ ಚರ್ಚೆ
ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ಮಾಡಿ ಕರಾವಳಿಯ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿತು. ಪಶ್ಚಿಮ ಘಟ್ಟ ಪ್ರದೇಶದ ಜನರ ಜೀವನೋಪಾಯ, ಕೃಷಿ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬೇಕು ಮತ್ತು ಗೊಂದಲಗಳಿಗೆ ಸ್ಪಷ್ಟತೆ ನೀಡಬೇಕೆಂದು ಮನವಿ ಮಾಡಲಾಯಿತು.
ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ವ್ಯಾಪ್ತಿಯ ಜಮೀನುಗಳ ಗಡಿ ಹಾಗೂ ಹಕ್ಕುಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ 'ಜಂಟಿ ಸರ್ವೆ' ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.







Comments