ಮಂಗಳೂರು: ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ; ಮೂವರು ಆರೋಪಿಗಳ ಬಂಧನ

₹1.63 ಕೋಟಿ ಮೌಲ್ಯದ ಸೊತ್ತು ವಶಕ್ಕೆ; ಕೇರಳ ಸೇರಿದಂತೆ ವಿವಿಧೆಡೆ ಮಾರಾಟಕ್ಕೆ ಸಂಚು
ಮಂಗಳೂರು: ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಮಾದಕವಸ್ತುವನ್ನು ಅಡಗಿಸಿಟ್ಟು ಕೋರಿಯರ್ ಮೂಲಕ ಮಂಗಳೂರಿಗೆ ಸಾಗಿಸಲು ಯತ್ನಿಸಿದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು ₹1,63,84,000 ಮೌಲ್ಯದ ಮಾದಕವಸ್ತು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 8ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ಜಿಲ್ಲೆಯ ಮಂಗಳಪಾಡಿಯ ಅಬ್ದುಲ್ ಹಾಪೀಲ್ (25), ಮಂಗಳೂರಿನ ಕೂಳೂರಿನ ಜಿಯಾವುಲ್ ಹಕ್ (30) ಹಾಗೂ ಪಾಂಡೇಶ್ವರದ ಅಲ್ತಾಫ್ (28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಪಂಜಾಬ್‌ನ ಅಮೃತಸರದಿಂದ ಎಂಡಿಎಂಎ ಖರೀದಿಸಿ, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಭಾಗದಲ್ಲಿ ಅಡಗಿಸಿ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಲು ಯೋಜಿಸಿದ್ದರು. ಬಳಿಕ ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ₹1.58 ಕೋಟಿ ಮೌಲ್ಯದ ಎಂಡಿಎಂಎ, ಮೂರು ಮೊಬೈಲ್ ಫೋನ್‌ಗಳು, ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್ ಸೇರಿದಂತೆ ಒಟ್ಟು ₹1.63 ಕೋಟಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ಪೈಕಿ ಅಬ್ದುಲ್ ಹಾಪೀಲ್ ಮತ್ತು ಅಲ್ತಾಫ್ ವಿರುದ್ಧ ಈ ಹಿಂದೆ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು. ಜಿಯಾವುಲ್ ಹಕ್ ದುಬೈನ ರಸ್ ಅಲ್ ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.







Comments