ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನನ-ಮರಣ ಪ್ರಮಾಣಪತ್ರಕ್ಕಾಗಿ ನಾಗರಿಕರ ಪರದಾಟ

ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಐಆರ್ ಪ್ರಕ್ರಿಯೆಗೆ ನಿಯೋಜಿಸಿರುವುದರಿಂದ, ಜನನ ಮತ್ತು ಮರಣ ಪ್ರಮಾಣಪತ್ರ ನೋಂದಣಿ ಸೇವೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ದಿನವಿಡೀ ಲಭ್ಯವಿರುತ್ತಿದ್ದ ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನು ಇದೀಗ ಜೂನ್ 30 ರಿಂದ ಜುಲೈ 29 ರವರೆಗೆ ಕೇವಲ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಪ್ರತಿದಿನ ನೂರಾರು ನಾಗರಿಕರು ಕಚೇರಿಯ ಹೊರಗೆ ಸುದೀರ್ಘ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಗಿದೆ.
ನವಜಾತ ಶಿಶುಗಳ ಜನನ ಪ್ರಮಾಣಪತ್ರಕ್ಕಾಗಿ ಪೋಷಕರು ಹಾಗೂ ಮರಣ ಪ್ರಮಾಣಪತ್ರಕ್ಕಾಗಿ ಮೃತಪಟ್ಟವರ ಕುಟುಂಬಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಿಂಚಣಿ, ವಿಮೆ, ಬ್ಯಾಂಕಿಂಗ್ ಸೇರಿದಂತೆ ವಿವಿಧ ತುರ್ತು ಕೆಲಸಗಳಿಗಾಗಿ ಪ್ರಮಾಣಪತ್ರ ಅಗತ್ಯವಿರುವ ಸಾರ್ವಜನಿಕರು ಸಮಯದ ಮಿತಿಯಿಂದಾಗಿ ತಮ್ಮ ಸರದಿ ಬರುವ ಮುನ್ನವೇ ಕೌಂಟರ್‌ಗಳು ಮುಚ್ಚುತ್ತಿರುವುದಕ್ಕೆ ಆಡಳಿತ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ವಿಶೇಷ ಕಾರ್ಯಗಳಿಗಾಗಿ ಸಿಬ್ಬಂದಿ ನಿಯೋಜನೆ ಅನಿವಾರ್ಯವಾಗಿದ್ದರೂ, ಅಗತ್ಯ ಸಾರ್ವಜನಿಕ ಸೇವೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ತಾತ್ಕಾಲಿಕ ಸಿಬ್ಬಂದಿ ನೇಮಕ, ಹೆಚ್ಚಿನ ಕೌಂಟರ್ ತೆರೆಯುವುದು ಅಥವಾ ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.







Comments