ಏಳು ವರ್ಷಗಳ ಬಳಿಕ ಸಿಕ್ಕ ದರೋಡೆ ಪ್ರಕರಣದ ಆರೋಪಿ – ಧರ್ಮಸ್ಥಳ ಪೊಲೀಸರ ಚಾಣಾಕ್ಷ ಕಾರ್ಯಾಚರಣೆ

ಧರ್ಮಸ್ಥಳ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯಾ ಗ್ರಾಮದ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರೆದು ಓಡಾಡುತ್ತಿದ್ದ ಪ್ರಮುಖ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2017ರಲ್ಲಿ ನಡೆದ ಈ ಪ್ರಕರಣದಲ್ಲಿ ದುಷ್ಕರ್ಮಿಗಳ ತಂಡ ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಬನಶಂಕರಿ ನಿವಾಸಿ ಮಣಿ ಅಲಿಯಾಸ್ ಮಣಿಕಂಠ (32) ಎರಡನೇ ಆರೋಪಿಯಾಗಿದ್ದ. ಕೃತ್ಯದ ನಂತರ ಜಾಮೀನು ಪಡೆದು ಹೊರಬಂದ ಆತ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಇದರಿಂದ ನ್ಯಾಯಾಲಯವು ಅವನ ವಿರುದ್ಧ ವಾರಂಟ್ ಹೊರಡಿಸಿತ್ತು.
ಆರೋಪಿ ಬೆಂಗಳೂರಿನಲ್ಲಿ ತಂಗಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್. ಗಾಣಿಗೇರ ಅವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತು. ಏಪ್ರಿಲ್ 26ರಂದು ಬೆಂಗಳೂರಿನ ಬನಶಂಕರಿ ಮಾರ್ಕೆಟ್ ಬಳಿ ಹೊಂಚು ಹಾಕಿದ ಪೊಲೀಸರು, ಸಿಬ್ಬಂದಿಗಳಾದ ವೃಷಭ ಮತ್ತು ಚರಣ್ ರಾಜ್ ಅವರ ಸಹಾಯದಿಂದ ಆರೋಪಿಯನ್ನು ಬಂಧಿಸಿದರು. ಕಾರ್ಯಾಚರಣೆ ಸಿನಿಮಾ ಶೈಲಿಯಲ್ಲಿ ನಡೆದಿರುವುದು ಗಮನಾರ್ಹವಾಗಿದೆ.
ಬಂಧಿತ ಆರೋಪಿಯನ್ನು ಏಪ್ರಿಲ್ 27ರಂದು ಪುತ್ತೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ದೀರ್ಘಕಾಲ ತಲೆಮರೆಸಿಕೊಂಡಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸುಮಾರು ಏಳು ವರ್ಷಗಳ ಹಳೆಯ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ತೋರಿದ ಚಾಣಾಕ್ಷತನಕ್ಕೆ ಧರ್ಮಸ್ಥಳ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.







Comments